ಅರಳುಗಣ್ಣಿನ ಹುಡುಗಿಯ ಕರೆಯುತ್ತೇನೆ!
ಕೈಕಾಲು ಸೋತಂತೆ ಅನಿಸಿ ಕುಳಿತಾಗೆಲ್ಲ
ಯಾರೂ ಮನೆಗೆ ಬರುವುದು ಬೇಡ ಎನಿಸುತ್ತದೆ
ಚೈತನ್ಯ ಸೋರಿ ಖಾಲಿಯಾದ ಭಾವ
ಕೋಣೆಯಲ್ಲಿ ಒಂಟಿಯಾಗಿದ್ದರೆ ಗೋಡೆಗಳೇ
ವಿಚಿತ್ರ ಆಕಾರಗಳ ತಳೆಯುತ್ತವೆ,
ನೆಲವೊಂದು ಆಳದ ಬಾವಿಯಂತಾಗಿ
ಬಿದ್ದೇ ಹೋಗುತ್ತೇನೆಂಬ ಭಯ ಕಾಡುತ್ತದೆ
ಸತ್ತಿರುವೆನೋ, ಬದುಕಿರುವೆನೋ ?!
ಆಗಾಗ್ಗೆ ಮೈ ಚಿವುಟಿ ನೋಡಿಕೊಳ್ಳುತ್ತೇನೆ
ನನ್ನೊಳಗೊಂದು ಪುಟ್ಟ ಹುಡುಗಿಯಿರುವುದನ್ನು
ನಾನೇಕೋ ಮರೆತಿದ್ದೇನೆ, ಅವಳೂ ನನ್ನನ್ನು!
ಓಡಿದಷ್ಟು ನೆಲವಿರುವ, ನಕ್ಕಷ್ಟು ನಗೆಯೇರುವ
ಗೋಡೆಗಳಿರದ ಊರಿಗೆ ಅವಳೆಲ್ಲೋ ಹಾರಿರಬೇಕು.
ಒಳಗಿನ ದೀಪ ಮಂಕಾಗಿ ಉರಿಯುತ್ತಿದೆ ಎಂದಾಗೆಲ್ಲ
ಆ ಪುಟ್ಟ ಅರಳುಗಣ್ಣಿನ ಹುಡುಗಿಯ ಕರೆಯುತ್ತೇನೆ
ಕಣ್ಣೆದುರು ಕುಣಿದು, ಮಾವಿನ ಮರವೇರುತ್ತಾಳೆ
ರುಚಿಗೆಟ್ಟ ನಾಲಗೆಗೆ ಉಪ್ಪು, ಹುಳಿ, ಖಾರ ಬೆರೆಸುತ್ತಲೇ
ಹರಿವ ನೀರಲ್ಲಿ ಕಾಲು ಇಳಿಬಿಟ್ಟು, ನಕ್ಷತ್ರ ಮಾತಾಡಿ
ಮೆಟ್ಟಿಲೇರಿ ಎಲ್ಲೋ ಹಾರಿಯೇ ಹೋಗುತ್ತಾಳೆ.
ನೋಡಿದರೆ ನಾನು ನಕ್ಷತ್ರವಾಗಿಬಿಟ್ಟಿರುತ್ತೇನೆ!
-ಎಂ. ಆರ್. ಕಮಲ, ಬೆಂಗಳೂರು
—–