“ಒಲವಿನ ಅಕ್ಷರಬಂಧುಗಳಿಗೆ, ನಲಿವಿನ ಬಣ್ಣಗಳ ಹಬ್ಬ ‘ಹೋಳಿ’ಯ ಹಾರ್ದಿಕ ಶುಭಕಾಮನೆಗಳೊಂದಿಗೆ ಕಾವ್ಯದುಡುಗೊರೆಯಿದು. ಒಪ್ಪಿಸಿಕೊಳ್ಳಿ. ರಂಗಿನ ಹಬ್ಬ ನಿಮ್ಮ ಬದುಕಿಗೆ ಸದಾ ಗೆಲುವು, ಒಲವು, ನಲಿವುಗಳ ರಂಗನ್ನು ತುಂಬಲಿ. ಪ್ರತಿದಿನವು ಸಂತಸ, ಸಂಭ್ರಮ, ಸಂಪ್ರೀತಿಗಳ ಚಿರ ವರ್ಣಗಳನ್ನು ಚೆಲ್ಲಲಿ. ನಿಮ್ಮ ಹೃನ್ಮನಗಳನ್ನು ನಿತ್ಯ ಬೆಳಗಿ ದೇದೀಪ್ಯವಾಗಿಸಲಿ. ಆ ಬೆಳಕು ಜಗಕೆಲ್ಲ ಬೆಳಕಾಗಲಿ. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಹೋಳಿ.. ಹೋಳಿ..!
ದಿಗಂತದಿ ಬುವಿ ಬಾನು ಬೆಸೆದು ನಿಂತ
ಕಾಮನಬಿಲ್ಲಿನಲಿ ಬಣ್ಣಗಳ ಸರಮಾಲೆ
ಸಪ್ತವರ್ಣದ ರಮ್ಯಾತಿರಮ್ಯ ರಂಗೋಲೆ.!
ಮೂಡಣ ಮುಂಜಾನೆಯಲಿ ಮೂಡುವ
ಆ ನೇಸರನ ಕಿರಣಗಳೆಷ್ಟು ವರ್ಣಮಯ
ವರ್ಣನಾತೀತ ವರ್ಣಗಳ ಭವ್ಯಾಲಯ.!
ಮುಸ್ಸಂಜೆ ಪಡುವಣದಿ ಮುಳುಗುವ
ಸಂಧ್ಯಾರವಿ ಮೊಗವೆಷ್ಟು ಮನೋಹರ
ಮುಗಿಲಂಗಳವೆಲ್ಲ ರಂಗುರಂಗಿನ ಚಿತ್ತಾರ.!
ಚಿಟಪಟ ಹಾರುವ ಬಣ್ಣದಾ ಜೀರ್ಜಿಂಬೆ
ಥಟ್ಟನೆ ಬಣ್ಣ ಬದಲಾಯಿಸುವ ಗೋಸುಂಬೆ
ತೂಗಾಡುವ ಬಣ್ಣಬಣ್ಣದ ಮರಗಿಡಕೊಂಬೆ.!
ಮುಗಿಲು ಕಡಲು ಹೊನಲು ಬಯಲು
ಎಲ್ಲೆಡೆಯೂ ಅದೆಷ್ಟು ಅದೆಂತಹ ರಂಗು
ಕಣಕಣಕು ಕ್ಷಣಕ್ಷಣವು ರಂಗಿನ ಗುಂಗು.!
ಈ ಪ್ರಕೃತಿಯೇ ವರ್ಣಮಯ ರಂಗೋಲಿ
ಎಲ್ಲೆಲ್ಲು ಜೀಕುತಿದೆ ಬಣ್ಣಗಳ ಜೋಕಾಲಿ
ಬದುಕು ಬೆಳಕು ಎಲ್ಲಕು ಬಣ್ಣಗಳ ಲಾಲಿ.!
ಓ ಗೆಳೆಯ ಈ ನಿಸರ್ಗದ ತುಂಬೆಲ್ಲವೂ
ಅನುದಿನವು ಅನುಕ್ಷಣವೂ ಬಣ್ಣದೋಕಳಿ
ಇಳೆಯೇ ಆಚರಿಸಿಹುದು ನಿತ್ಯವು ಹೋಳಿ.!
-ಎ.ಎನ್.ರಮೇಶ್.ಗುಬ್ಬಿ.