ರಂಗ ಕಲಾವಿದರೆಂದರೆ…
ರಂಗು ರಂಗಿನ ರಂಗಭೂಮಿ
ಕಲಾವಿದರ ಜನ್ಮಭೂಮಿ
ಸರ್ವ ಋತುವಿನಲ್ಲೂ
ಕಲೆ ಬೆಳೆಯುವ ಎರೆಭೂಮಿ
ಕುಲ ಕಲಹಗಳ ಕಳೆಯ ಕಿತ್ತು
ಸರ್ವ ಸಮತೆ ಬೆಳೆವ ಒಕ್ಕಲಿಗರು
ಕಲಾವಂತಿಕೆಯ ಮತಕೆ ರಂಗಪಥ
ತೋರಿದ ವಿಶ್ವಮಾನವರು
ಹಗಲು ಉರಿವ ಸೂರ್ಯರು
ರಾತ್ರಿ ಹೊಳೆವ ಚಂದ್ರಮರು
ಬೆಂಕಿಯುಂಡು ಹೂ ಹೆತ್ತವರು
ಬೆಳಕು ಬೀರಿ ಕತ್ತಲಲಿ ನಿಂತವರು
ರಾತ್ರಿಯಿಡೀ ಕಲೆಯೇ ಉದ್ಯಾನ
ಹಗಲು ಹಸಿದ ಒಡಲಿನ ಧ್ಯಾನ
ನಿದ್ದೆಯ ಜಗವ ಎಚ್ಚರಿಸಿದ ಬುದ್ಧರು
ಕಲೆಗಾಗಿ ಸಕಲವ ತೊರೆದ ಸಿದ್ದರು.
ಸೂತ್ರದಾರನ ಆಣತಿಯಂತೆ
ಪಾತ್ರದಿ ಕುಣಿದರು ಗೊಂಬೆಯಂತೆ
ಜಗದ ಪಾತ್ರವು ಮುಗಿಯಲು
ಬಣ್ಣ ಅಳಿಸಿ ಮರೆಯಾದವರು
ಕಲಾವಿದ ಅಳಿದರು ಕಲೆ ಜೀವಂತ
ಸೂರ್ಯ ಚಂದ್ರರಿರುವ ಪರ್ಯಂತ.
-ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ.