ಮನದ ಗುಡಿಯಲಿರಲಿ ಶಾಂತಿಮಂತ್ರ….
ಜಾತಿಗೊಂದು ನಿಯಮ ಮತದೊಳಗೊಂದುಮರ್ಮ
ಹಲವು ಧರ್ಮ ಒಂದೊಂದರದೊಂದು ಸಂದೇಶ
ಮಾತಿಗೊಂದೊಂದು ಅರ್ಥ ಅವರವರ ನೋಟಕೆ
ಸತ್ಯವನರಿಯದೆ ಅಳಿಯುತಿದೆಯೇಕೋ ಸಮರಸಭಾವ…
ಒಂದೇ ಕರುಳ ಬಳ್ಳಿಯ ಕುಡಿಗಳೊಳಗವಿತಿದೆ
ಹೊನ್ನು ಮಣ್ಣಿನೊಡೆದತನ ನೂರು ದ್ವೇಷ ಕಿಡಿಗಳು
ಚಿಗುರು ಜೀವರಾಶಿಗೆರೆಯದೆ ಒಲವಪ್ರೀತಿಧಾರೆ
ಮರೆಯಾಗುತಿದೆಯೇಕೋ ಸವಿಸೋದರಭಾವ..
ದೇಶದೆಲ್ಲೆ ಭಾಷೆಯೆಲ್ಲೆಗೊಂದೊಂದು ಗಡಿಯಿದೆ
ಸಂಕುಚಿತತೆ ತೊರೆದು ವಿಕಸಿತವಾಗುವ ಮನವಿದೆ
ದ್ವೇಷವನಳಿಸಿ ಪ್ರೀತಿಯನುಣಿಸಿ ನಿಜ ಮಾನವನಾಗಲು
ಮೊಳಗುತಿರಲೆಂದೂ ಮನದ ಗುಡಿಯಲಿ ನಿತ್ಯ ಶಾಂತಿ ಮಂತ್ರ.
-ಎಂ.ಆರ್. ಸತೀಶ್, ಕೋಲಾರ