ಅನುದಿನ‌ ಕವನ-೧೧೮೬, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ಸತ್ಯ ನ್ಯಾಯ ಪ್ರೀತಿ ಓಕುಳಿಯಾಡಲಿ!

ಸತ್ಯ ನ್ಯಾಯ ಪ್ರೀತಿ ಓಕುಳಿಯಾಡಲಿ!

ಅಪ್ಪ
ಬೀಡಿಗಷ್ಟೆ
ಬೆಂಕಿ ಹಚ್ಚುತ್ತಿರಲಿಲ್ಲ
ಸೇದುವ ಬೀಡಿಯನ್ನು
ಅವ್ವನೆದೆಗೂಡಿಗೂ ಇಕ್ಕುತಿದ್ದ
ಸುಟ್ಟುಕೊಂಡೆ ಬಾಳು ಕಟ್ಟಿಕೊಂಡಳು

ನಿತ್ಯ
ರಾಜಧಾನಿಯಲ್ಲಿ
ಅಪ್ಪ ಚಕ್ಕಂದವಾಡುತ್ತಿದ್ದರೆ
ಅವ್ವ ತನ್ನ ಸಿಟ್ಟನ್ನೆಲ್ಲಾ ಸುಟ್ಟು
ತಟ್ಟುವ ರೊಟ್ಟಿಗಳೊಂದಿಗೆ
ತಾನೂ ಬೇಯುತ್ತಿದ್ದಳು ಹಳ್ಳಿಯಲಿ

ಅಪ್ಪನ
ಮಿಥ್ಯದಾಟದಲಿ
ಅವ್ವನ ಸತ್ಯ ಗೆಲ್ಲಲಿಲ್ಲ
ಬಿಟ್ಟ ಬಿರುಕುಗಳಿಗೆ ಅವ್ವ
ಮಣ್ಣುಮೆತ್ತಿ ಬಣ್ಣ ಬಳಿದಳು
ಒಡಲೊಳಗಿನ ನೋವುಗಳನು
ಹಡೆಯಲಾಗದೆ ಹೊತ್ತು ನಡೆದಳು

ಅಪ್ಪನ
ದುರಾಡಳಿತದಲ್ಲಿ
ನನ್ನ ಪ್ರತಿರೋಧವೂ ಗೌಣ
ಅವ್ವನೂ ಅದೇಕೊ ಮೌನ
ದೈವದ ತಕ್ಕಡಿಯೂ ಅಪ್ಪನ ಪರವೇ

ಮತದಾರರೇ…
ಅಪ್ಪ ಮತ್ತೆ ಕಣದಲ್ಲಿದ್ದಾನೆ
ನಿಮ್ಮ ಬಳಿ ಬಂದು ಮತ ಕೇಳ್ತಾನೆ
ಈ ಸಾರಿಯಾದರೂ ಸೋಲಿಸಿಬಿಡಿ
ಸತ್ಯ ನ್ಯಾಯ ಪ್ರೀತಿ ಓಕುಳಿಯಾಡಲಿ‌.

-ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ