ಬಳ್ಳಾರಿ, ಏ.3: ರಂಗಭೂಮಿ ಮತ್ತು ಜಾನಪದ ಕ್ಷೇತ್ರಕ್ಕೆ ತಮ್ಮ ಅನನ್ಯ ಸೇವೆ, ಸಾಧನೆ ಮೂಲಕ ಕನ್ನಡ ನಾಡಿಗೆ ವಿಶೇಷವಾಗಿ ಬಳ್ಳಾರಿಗೆ ಕೀರ್ತಿ ತಂದ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ನಗರದಲ್ಲಿ ಕಲಾಕ್ಷೇತ್ರ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ಒತ್ತಾಯಿಸಿದರು.
ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಬಳ್ಳಾರಿ ಜಿಲ್ಲಾ ಘಟಕ ಹಾಗೂ ನಗರದ ಶ್ರೀ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಇವರ ಸಹಯೋಗದಲ್ಲಿ ಮಂಗಳವಾರ ಸಂಜೆ ಸ್ನೇಹ ಸಂಪುಟ ಸಭಾಂಗಣದಲ್ಲಿ ಹೆಸರಾಂತ ಅಂತರಾಷ್ಟ್ರೀಯ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ್ದ
ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತದ ಸಂಸ್ಕೃತಿ, ಪರಂಪರೆಯನ್ನು ತೊಗಲುಗೊಂಬೆ ಕಲೆ ಮೂಲಕ ದೇಶ ವಿದೇಶಗಳಲ್ಲಿ ಪ್ರಚುರಪಡಿಸಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಬಳ್ಳಾರಿಯ ಹೆಮ್ಮೆ ಎಂದು ಕೊಂಡಾಡಿದರು.
ವೀರಣ್ಣ ಅವರೊಂದಿಗಿನ ಎರಡೂವರೆ ದಶಕಗಳ ಸಾಂಸ್ಕೃತಿಕ ಒಡನಾಟವನ್ನು ಹಂಚಿಕೊಂಡ ಮಂಜುನಾಥ್, ಪ್ರತಿಭೆ, ಸರಳ, ಸಜ್ಜನಿಕೆ, ವಿನಯವಂತಿಕೆಯಲ್ಲಿ ವರನಟ ಡಾ. ರಾಜಕುಮಾರ್ ಅವರಂತಿದ್ದರು ಎಂದರು.
ಸಂಗೀತ ಬ್ರಹ್ಮ ಡಾ.ಹಂಸಲೇಖ ಅವರು ಬೆಳಗಲ್ಲು ವೀರಣ್ಣ ಅವರನ್ನು ರಂಗಭೂಮಿಯ ಡಾ. ರಾಜಕುಮಾರ್ ಎಂದೇ ಕರೆಯುತ್ತಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ ಅವರು, ನಾಡೋಜ ಬೆಳಗಲ್ಲು ವೀರಣ್ಣ ಕಲಾಕ್ಷೇತ್ರ ನಿರ್ಮಾಣದ ಜತೆಗೆ ನಗರದ ಪ್ರಮುಖ ರಸ್ತೆಗೆ ಇವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಶೀಘ್ರದಲ್ಲೇ ಮಹಾನಗರ ಪಾಲಿಕೆಯ ಮೇಯರ್, ಆಯುಕ್ತರಿಗೆ ತಮ್ಮ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಮನವಿ ಪತ್ರ ನೀಡಲಾಗುವುದು. ಚುನಾವಣೆ ಬಳಿಕ ಸಿಎಂ., ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ನಗರ ಶಾಸಕರನ್ನು ಭೇಟಿ ಮಾಡಿ ಕಲಾಕ್ಷೇತ್ರ ನಿರ್ಮಾಣಕ್ಕೂ ಒತ್ತಾಯಿಸಲಾಗುವುದು ಎಂದರು.
ಅಖಂಡ ಬಳ್ಳಾರಿ ಜಿಲ್ಲೆ ಕಲಾವಿದರ ತವರು. ಬೆಳಗಲ್ಲು ವೀರಣ್ಣ ಮತ್ತು ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಅವರ ಜತೆ ಸಾಮಾಜಿಕ, ಪೌರಾಣಿಕ ನಾಟಕ ಗಳಲ್ಲಿ ನಟಿಸಿದ ಭಾಗ್ಯ ನನ್ನದು. ಕರ್ಣ, ದುರ್ಯೋಧನ ಪಾತ್ರವನ್ನು ಇಬ್ಬರೂ ಮೆಚ್ಚಿದ್ದರು ಎಂದು ಸ್ಮರಿಸಿದರು.
ಸತ್ಯಂ ಬಿಇಡಿ ಕಾಲೇಜಿನ ಪ್ರಾಚಾರ್ಯ, ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಅಶ್ವರಾಮು, ಅಲೆಮಾರಿ, ಬುಡಕಟ್ಟು ಕಲೆಗಳಲ್ಲಿ ಅಜ್ಞಾತವಾಗಿದ್ದ ನಾಡಿನ ಜಾನಪದ ತೊಗಲುಗೊಂಬೆ ಕಲೆಯ ಮಹತ್ವವನ್ನು ಪ್ರಪಂಚಕ್ಕೆ ಪರಿಚಯಿಸಿದ ಮಹಾನ್ ಕಲಾವಿದರು ವೀರಣ್ಣನವರು ಎಂದು ಬಣ್ಣಿಸಿದರು.
ಕವಿ, ಉಪನ್ಯಾಸಕ, ರಂಗ ಕಲಾವಿದ ಎಎಂಪಿ ವೀರೇಶ ಸ್ವಾಮಿ ಅವರು ವೀರಣ್ಣ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಸ್ವರಚಿತ ಕವನ ವಾಚಿಸುವ ಮೂಲಕ ಗಮನ ಸೆಳೆದರು.
ಸಂಘಟಕ ಬಿಸಲಹಳ್ಳಿ ಬಸವರಾಜ್, ಬೆಳಗಲ್ಲು ವೀರಣ್ಣ ಅವರ ಒಡನಾಟ ಸ್ಮರಿಸಿ ಭಾವುಕರಾದರು.
ರಂಗಕಲಾವಿದ ಪರಶುರಾಮ್ ಹಂದ್ಯಾಳ್ ಶಕುನಿ ಪಾತ್ರದ ಸಂಭಾಷಣೆ ಹೇಳಿ ಚಪ್ಪಾಳೆ ಗಿಟ್ಟಿಸಿದರು.
ವೇದಿಕೆಯಲ್ಲಿ ಅಂತರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ಮಲ್ಲಿಕಾರ್ಜುನ ಬೆಳಗಲ್ಲು ಉಪಸ್ಥಿತರಿದ್ದರು.
ಅಧ್ಯಾಪಕ ಬೆಳಗಲ್ಲು ಹನುಮಂತು, ವಿದ್ಯಾರ್ಥಿನಿಯರ ನಿಲಯ ಪಾಲಕಿ ಲಕ್ಷ್ಮಿ ಬೆಳಗಲ್ಲು, ಆಲಾಪ್ ಸಂಗೀತ ಕಲಾ ಬಳಗದ ರಮಣಪ್ಪ ಭಜಂತ್ರಿ, ಬಿಸಿಎಂ ಇಲಾಖೆ ಕಚೇರಿ ವ್ಯವಸ್ಥಾಪಕ ಶ್ಯಾಮಪ್ಪ, ಅಲೆಮಾರಿ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಹನುಮಂತ ದಾಸರ್, ಕಲಾವಿದ ಕುಮಾರಗೌಡ ಅಮರಾಪುರ, ಹಿರಿಯ ಛಾಯಾಗ್ರಾಹಕ ತಿಪ್ಪೇಸ್ವಾಮಿ, ಅಹಿಂದ ಮಂಜುನಾಥ್, ಟಿ. ಸುನೀಲ್ ಕುಮಾರ್, ಕಲಾ ಟ್ರಸ್ಟ್ ಸದಸ್ಯೆ ಸಿ.ತುಳಸಿ ಮತ್ತಿತರ ಗಣ್ಯರು ಇದ್ದರು.
ಯುವ ಗಾಯಕ ಗಗನ ಕುಮಾರ್ ಪ್ರಾರ್ಥಿಸಿದರು. ಕಜಾಪ ಪ್ರಧಾನ ಕಾರ್ಯದರ್ಶಿ ಡಾ.ಅಶ್ವರಾಮು ಸ್ವಾಗತಿಸಿದರು. ಕವಿ ಎಎಂಪಿ ವೀರೇಶಸ್ವಾಮಿ ನಿರೂಪಿಸಿದರು. ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ನ ಅಧ್ಯಕ್ಷ ಸುಬ್ಬು ಶಿಳ್ಳೇಕ್ಯಾತರ ವಂದಿಸಿದರು.
——