ಅನುದಿನ ಕವನ-೧೧೯೧, ಕವಯಿತ್ರಿ: ಶೋಭಾ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಕಡಲೊಡಲು

ಏ. ೫ ಅಂತರಾಷ್ರ್ಟೀಯ ಕಡಲ ದಿನ! ಈ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆ ಹೂವಿನ ಹಡಗಲಿಯ ಕವಯಿತ್ರಿ ಶೋಭ‌ ಮಲ್ಕಿಒಡೆಯರ್ ಅವರ ‘ಕಡಲು’ ಕುರಿತು ರಚಿಸಿರುವ ‘ಕಡಲೊಡಲು’ ಕವಿತೆ ಕಾವ್ಯಪ್ರಿಯರಿಗಾಗಿ!

ಕಡಲೊಡಲು

ಕಡಲಿನ ಏರಿಳಿತದ ಹೃನ್ಮನದ ಆಟ
ಅಬ್ಬರದುಬ್ಬರದ ತೃಪ್ತಿಯ ಕಣ್ಣೋಟ

ಸೂರ್ಯನಾಗಮನದಿ ಚಿಮ್ಮುತಿದೆ ಬೆಳ್ಳಿಯ ಕಿರಣ
ಪೌರ್ಣಮೆಯ ಬೆಳದಿಂಗಳಲಿ ಕೌತುಕದೌತಣ|

ಕಡಲ ಅಲೆಗಳ ಏರಿಳಿತದ ಝೇಂಕಾರ
ತನ್ನೊಡಲಿನಲಿ ಒಳಿತು ಕೆಡಕುಗಳ ಅಬ್ಬರ

ಕಡಲಿನ ಆಳ, ಮೀನ ಹೆಜ್ಜೆ ಸಿಕ್ಕೀತೆ ಎಣಿಕೆ
ಹೆಣ್ಣಿನ ಮನದ ಮರ್ಮವೂ ಇದಕೇ ಹೋಲಿಕೆ

ಕಪ್ಪೆಚಿಪ್ಪು ಶಂಕು ಮರಳ ಮೇಲೆ ಹರಡಿ ಹಾಸಿದೆ
ವರ್ಣನೆಗೆ ನಿಲುಕದಷ್ಟು ಕಡಲೊಳು‌ ಅಡಗಿದೆ

ಹೀಗೆ ಉಕ್ಕುತಲಿರಲಿ ಗಜಗಾಂಭೀರ್ಯದ ಕಡಲು
ತನ್ನೊಳಗೆ ಅಡಗಿಸಿಟ್ಟಿದೆ ಸೌಂದರ್ಯದ ಒಡಲು


-ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ