ಗುಲಾಬಿ ಮತ್ತು ರಕ್ತ
ಕೋಟಿನ ಎದೆಗೆ ಗುಲಾಬಿ ಸಿಕ್ಕಿಸುತ್ತಿರಲಿಲ್ಲ
ರಾಮಮನೋಹರ
ಹೀಗೆ ಗುಲಾಬಿಯನ್ನು ಕೇವಲ ಎದೆಯ ಹೊರಗೆ
ಸಿಕ್ಕಿಸುವವರನ್ನು ಕಂಡರೂ
ಆಗುತ್ತಿರಲಿಲ್ಲ ಅವನಿಗೆ
ಗುಲಾಬಿ ಪ್ರೀತಿಯ ಸಂಕೇತ
ಅನ್ನುತ್ತಾರೆ ಜನರು
ಪ್ರೀತಿ ಬದುಕಿನ ಸಂಕೇತ
ಅನ್ನುತ್ತಿದ್ದ ರಾಮಮನೋಹರ
ಹಿಂದೆ ರಾಮಮನೋಹರನನ್ನು ಎದೆಯಲ್ಲಿಟ್ಟು
ಕೊಂಡಾಡುತ್ತಿದ್ದ ಜನ
ಈಗ ರಾಮನನ್ನು ಅಪ್ಪಿದ್ದಾರೆ
ಮನೋ
ಹರಹರ ಮಹಾದೇವ ಎನ್ನುತ್ತಿದ್ದಾರೆ
ಪ್ರೀತಿಸಿದ ರಾಮಮನೋಹರ ಎಲ್ಲರನ್ನೂ
ಆದರೆ ಮದುವೆಯಾಗಲಿಲ್ಲ
ಈಗ ರಾಮನ ಪಾರ್ಟಿಯನ್ನು
ಮದುವೆಯಾದವರು ಹೇಳುತ್ತಿದ್ದಾರೆ
ನಮ್ಮದು ಮದುವೆ ಮಾತ್ರ, ಒಳಗೆ ಪ್ರೀತಿಯಿಲ್ಲ
ಹೀಗೆಯೇ ಒಂದು ಕೋಟು
ಆ ಕೋಟಿಗೊಂದು ಜೇಬು
ಆ ಜೇಬಿನ ಮೇಲೆ ಗುಲಾಬಿ
ಹೊರಗೆ ಪ್ರೀತಿ ಮತ್ತು ರಕ್ತ
ಒಳಗೆ ನೀತಿ ವಿರಕ್ತ
ಗೋರಿಯ ಮೇಲೆ ಗುಲಾಬಿಯ ರಂಗೋಲಿ
ಮಸಣದಲ್ಲಿ ಚದುರಂಗ
ರಾಜಕೀಯ ಎಂದರೆ ತಂತ್ರ
ರಾಜಕೀಯವೆಂದರೆ ಇಟ್ಟಿಗೆ
ನಗುತ್ತಾರೆ ರಾಮಮನೋಹರ
ರಾಮ ಮತ್ತು ಮನೋಹರ ಒಟ್ಟಿಗೇ
ಕ್ಷಮಿಸಿ
ಪೆನ್ನು ಕೂಡಾ ಪಕ್ಕದ ಮನೆಯವರದ್ದು
ಹಾಳೆಯೂ ಮುಗಿದಿದೆ
ನಿಲ್ಲಿಸುತ್ತೇನೆ, ನಮಸ್ಕಾರ!
-ಬಿ.ಎಂ.ಹನೀಫ್, ಬೆಂಗಳೂರು