ಅನುದಿನ‌ ಕವನ-೧೧೯೪, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಬಾ ಮಳೆ

ಬಾ ಮಳೆ

ಕೆಂಡದ ಉಸಿರು
ಬೀದಿ ನಲ್ಲಿಯಲ್ಲಿ ಯಾರ ಕಣ್ಣೀರು ?
ಹಣೆ ಬರಹ ಸೀಟಿದರೂ
ಕವಿತೆಯ ಪದಗಳಲ್ಲಿ ನಿಲ್ಲದ ಬೆವರು.

ಮಣ್ಣು ಕಣ ಕಣದ
ತೆರೆದ ಬಾಯಿಯೊಳಗೆ ಒಣ
ಬೀಜದ ಗರಿಕೆ
ಅವತಾರ ವೆತ್ತಿ ಹಸಿರು ಹಾಡಿದ
ಮರ ಮರ ಗಳಲ್ಲಿ ಬೆವರ ತುರಿಕೆ.

ಕಣ್ಣು ತೆರೆದೆ ನಿದ್ದೆಗೆ ಜಾರಿ
ಒದ್ದೆ ತೀರದಲಿ ತೂಕಡಿಸುವ ದೋಣಿ
ಯಾರ ಬಳಿಯೂ ಇದ್ದಂತಿಲ್ಲ ಈಗ
ಮಳೆ ಮೋಡದ ಬಾನಿಗೆ ಮುತ್ತಿಗೆ ಹಾಕುವ ಏಣಿ.

ಮತ್ತೆ
ಬೀಸಲಿ ಬಿರುಗಾಳಿ ಮಳೆಗಾಳಿ
ಬಿದಿರು ಮೆಳೆ ಮೇಲೆ  ಹೊಕ್ಕುಳ ಸುತ್ತಿನ  ಸುಳಿಗಾಳಿ
ಕುರುಡು ಕಣ್ಣಿನ ಕೊಳಲಿಗೆ ಉಸಿರೂಡಿ
ಹನಿ ಹನಿ ಕಂಬನಿ ನುಡಿ  ಹಾಡಿ

ಮಳೆಯಾಗಿ ಹೊಳೆಯಾಗಿ ಉಕ್ಕಲಿ
ಹಸಿರು ಮತ್ತೆ ಚಿಗುರಲಿ ಎಲೆ ಎದೆಯ
ಮೇಲೆ ಹೂ ಬಳ್ಳಿ ಮೂಡಿ

ಫಳ ಪಳ ಹೊಳೆವ ಸಲಿಕೆ ಗುದ್ದಲಿ ಬಾಯಿಗೆ ಹಸಿ ಮಣ್ಣು ಮೆತ್ತಲಿ.


-ಎಲ್ವಿ, ಬೆಂಗಳೂರು
—–