ದ್ವಿತೀಯ ಪಿಯು ಪರೀಕ್ಷೆಯಲ್ಲಿ 23 ನೇ ಸ್ಥಾನ: ವಿದ್ಯಾನಗರಿ ಧಾರವಾಡ ಎತ್ತ ಸಾಗುತ್ತಿದೆ!? -ಬಸೂ, ಕವಿ- ಶಿಕ್ಷಣ ಪ್ರೇಮಿ, ಧಾರವಾಡ

ಒಂದು ಕಾಲದಲ್ಲಿ ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಯುವಕರೆಲ್ಲ ವಿದ್ಯಾಭ್ಯಾಸಕ್ಕಾಗಿ ಧಾರವಾಡಕ್ಕೆ ಬರುತ್ತಿದ್ದರು.. ಇಲ್ಲಿ ಓದುವುದು ಅವರ ಕನಸಾಗಿರುತ್ತಿತ್ತು.. ಧಾರವಾಡಕ್ಕಿರುವ ವಿದ್ಯಾನಗರಿ ಎಂಬ ಹೆಸರೂ ಕಾರಣವಾಗಿತ್ತು . ಪಕ್ಕದ ಹುಬ್ಬಳ್ಳಿಗೆ ಛೋಟಾ ಬಾಂಬೆ ಎಂದೋ ವ್ಯಾಪಾರದ ನಗರ ಎಂದೋ ಕರೆಯಲಾಗುತ್ತಿತ್ತು.. ಧಾರವಾಡ ಶಿಕ್ಷಣಕ್ಕೆ ಫೇಮಸ್ ಎಂಬಂತಿತ್ತು.
ಧಾರವಾಡಕ್ಕೆ ವಿದ್ಯಾನಗರಿ ಎಂದು ಕರೆಯಲು ಇಲ್ಲಿನ ಶಿಕ್ಷಣದ ಗುಣಮಟ್ಟ ಕಾರಣವಾಗಿತ್ತು. ಇಂಥ ಫೇಮಸ್ಸಿನ ಧಾರವಾಡ ಜಿಲ್ಲೆಗೆ ಈ ವರ್ಷದ ದ್ವಿತೀಯ ಪಿಯು ಪರೀಕ್ಷೆಯಲ್ಲಿ 23 ನೇ ಸ್ಥಾನ. ಯಾಕೆ ಹೀಗಾಗುತ್ತಿದೆ?
ಇಂದೂ ಧಾರವಾಡ ವಿದ್ಯಾರ್ಥಿ ಯುವಜನರಿಂದಲೇ ಕಿಕ್ಕಿರಿದು ತುಂಬಿದೆ.. ಮಾರಿಗೊಂದು ಕೋಚಿಂಗ್ ಸೆಂಟರ್.. ಜತೆಗೆ ಶಿಕ್ಷಣ ಎಂಬುದೇ ಇಲ್ಲಿ ದೊಡ್ಡ ವ್ಯಾಪಾರ. ಕಾಲೇಜುಗಳು ಹೊರತಾಗಿಲ್ಲ… ವ್ಯಾಪಾರ ಎಂದಾಗ ಏನಾಗಬೇಕಿತ್ತೊ ಅದೇ ಸಂಭವಿಸಿದೆ.
ಇಲ್ಲಿ ಪಿಯುಗೆ ಸೇರಬೇಕೆಂದರೆ ಲಕ್ಷ ಲಕ್ಷ ಫೀ ಕೊಡಬೇಕು. ಒಂದೊಂದು ಕಾಲೇಜು ಒಂದೊಂದು ಕುರಿದೊಡ್ಡಿಯೇ.. ಅಷ್ಟು ವಿದ್ಯಾರ್ಥಿಗಳು. ಗುಣಮಟ್ಟದ ಶಿಕ್ಷಣ ಕಡೆ ಗಮನ ಕೊಡೋ ಎಲ್ಲೋ ಒಂದೆರಡು ಕಾಲೇಜುಗಳು. ಅಲ್ಲಿಯೂ ರಾಶಿ ರಾಶಿ ವಿದ್ಯಾರ್ಥಿಗಳಿಂದಾಗಿ ವೈಯಕ್ತಿಕ ಕಾಳಜಿಗಳಿಲ್ಲ.. ಆದ್ಯತೆಗಳಿಲ್ಲ..
ಕಾಲೇಜುಗಳು ರೊಕ್ಕದ ಮುಖ ನೋಡುತ್ತ ಶಿಕ್ಷಣದ ಕಡೆ ಗಮನ ಕೊಡದೇ ಇರಲಾರಂಭಿಸಿದ್ದರಿಂದ ಇವತ್ತು ಈ ಸ್ಥಿತಿ ಎದುರಾಗಿದೆ.
ಒಂದೊಂದು ಮಾರ್ಗದಲ್ಲಿ ಹತ್ತಹನ್ನೆರಡು ಕೋಚಿಂಗ್ ಸೆಂಟರ್ ಗಳು, 24 ತಾಸಿನ ಓದಿನ ಮನೆಗಳು ಬೇಕಾಬಿಟ್ಟಿಯಾಗಿ ಹಬ್ಬಿರುವದರಿಂದ ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾದ ಅಬ್ಬೇಪಾರಿಗಳು. ಎಲ್ಲಿಯೂ ಸಮಾಧಾನ ಇಲ್ಲದ ಅಶಾಂತರು. ಕಿಂಚಿತ್ ಕಾಳಜಿಗಳಿಲ್ಲದೆ ಕಾಲೇಜುಗಳ ನಡುವಿನಿಂದ ಜಾರಿ ಬೀದಿಗೆ ಬಿದ್ದ ಕೂಸುಗಳು.
ಗುಣಮಟ್ಟದ ಶಿಕ್ಷಣದ ಬಗ್ಗೆ ಯಾರು ತಲೆಕೆಡಿಸಿಕೊಳ್ಳಬೇಕು..?. ಹಣವೇ ಸರ್ವಸ್ವ ಎನ್ನುವಂತಾದಲ್ಲಿ.. ಹೌದು ಒಂದೊಂದು ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರೂ, ಕಾಲೇಜಿನ ಪ್ರಾಂಶುಪಾಲರೂ ಎಷ್ಟೋ ಕೋಟಿಗಳ ಒಡೆಯರು..
ಗುಣಮಟ್ಟದ ಶಿಕ್ಷಣ ಬಗ್ಗೆ ಜಿಜ್ಞಾಸೆ ಹುಟ್ಟುತ್ತಿಲ್ಲ.. ಇದೇ ಮುಂದುವರೆದರೆ ಧಾರವಾಡ ಜಿಲ್ಲೆಯ ಸ್ಥಾನ ಇನ್ನಷ್ಟು ಕುಸಿದರೆ ಅಚ್ಚರಿಯ ವಿಷಯ ಎನಿಸುವುದೇ ಇಲ್ಲ


-ಬಸೂ, ಹೋರಾಟಗಾರರು, ಧಾರವಾಡ
—–