ಅನುದಿನ ಕವನ-೧೧೯೯), ಕವಿ: ರವೀ ಹಂಪಿ, ಕವನದ ಶೀರ್ಷಿಕೆ: ಅಪ್ಪಾ…..

ಅಪ್ಪಾ…..

ಕಾಗಿಕಾಲು ಗುಬ್ಬಿಕಾಲುಗಳಂತೆ
ಅಕ್ಷರಗಳು ಕಾಣಿಸಿದಾಗ
ವಿದ್ಯಾರ್ಥಿನಿಯೊಬ್ಬಳ ಕಿವಿಗೆ ಹಳ್ಳಿಟ್ಟು
ಹೆಬ್ಬೆರಳು ತೋರು ಬೆರಳುಗಳಿಂದ
ಬಿಗಿಯಾಗಿ ಒತ್ತಿದಾಗ, ‘ಅಪ್ಪಾ’ ಅನ್ನುತ್ತ
ನೋವು ತಾಳದೆ ವೇದನೆಯಿಂದ
ಚೀರಿಕೊಂಡಳು

ಜೋರಾದ ಸದ್ದಿಗೆ ಬೆಚ್ಚಿಬಿದ್ದು
‘ನಾನೇನು ನಿಮ್ಮಪ್ಪನಲ್ಲ
ನೀ ಅತ್ತರೆ ಸುಮ್ಮನಿರೋಕೆ’
ಅಂದವನೇ ಮತ್ತೊಂದು ಕಿವಿಗೆ
ಹಳ್ಳಿಟ್ಟು ಒತ್ತಿದೆ
‘ಹೌದು ನೋಡ್ರಿ ನಾನು ಹಂಗೇ ಅನ್ನಾಕಿ,
ಅಪ್ಪಾ..’ ಅನ್ನುತ್ತ ಮತ್ತೆ ನರಳಿದಳು

ನೋಯ್ದಂತಾಗಿ
ಕಿವಿ ಮುಟ್ಡಿ ನೋಡಿಕೊಂಡರೆ
ನನ್ನ ಕಿವಿಯಾಲೆಗಳಿಂದ
ರಕ್ತ ತೊಟ್ಟಿಕ್ಕುತ್ತಿದೆ.


-ರವೀ ಹಂಪಿ
—–