ಅಪ್ಪನ ಹೆಸರಿಟ್ಟಿದ್ದೇವೆ ಮಗನಿಗೆ
ನಿನ್ನೆ
ನಮ್ಮ ಬುದ್ಧ ಕುಟೀರಕೆ
ಅಣ್ಣ ಅಕ್ಕ ಸಂಕವ್ವೆ ಬಂದಿದ್ದರು
ಮನೆಯಂಗಳದಲಿ ಆಡುತಿದ್ದ
ಹಾಲುಗಲ್ಲದ ಹಸುಗೂಸನೆತ್ತಿಕೊಂಡು
ಸಂಕವ್ವೆ ಕೇಳಿದಳು ‘ಮಗಾ ಹೆಸರೇನೆಂದು?’
ಮಗು ‘ಭೀಮರಾವ್’ ಎಂದುಲಿಯಿತು
ಆಮೇಲೆ
ಅಕ್ಕ ಮಗುವಿನ ನೆತ್ತಿ ನೇವರಿಸಿ
ಹಣೆಗೆ ಮುತ್ತಿಟ್ಟು ಪಡೆದ ಮಗನೆಂದು
ಹಡೆದವಳ ಬಳಿ ಹೆಮ್ಮೆಯಿಂದ ಹೇಳಿದಳು
ಕಡೆಗೆ
ಅಣ್ಣನೂ ಮಗುವಿನೊಡನೆ ಕೂಡಿ
ಮಣ್ಣಲ್ಲಿ ಆಡಿ ಹಾಡಿ ನಗೆಯಾಡಿದರು
ಎಲ್ಲರೂ
ಕೈ ತೊಳೆದುಕೊಂಡು
ಸಂದುಕದಲ್ಲಿದ್ದ ಸಂಕಟದ ಬುತ್ತಿ ಬಿಚ್ಚಿ
ಹಂಚಿಕೊಂಡುಂಡು ಕೊಂಚ ಹಗುರಾದೆವು
-ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ
—–