ಇಳೆಯ ತಪನೆ
ಹೇ ಗಂಗೆಯೇ…..
ಅರೆಕ್ಷಣವಾದರೂ
ಪರಶಿವನೊಂದಿಗೆ ಮುನಿದು
ಧರೆಗಿಳಿಯಬಾರದೆ
ಇಳೆಗೆ ತಂಪಾಗಿ
ಸೊಂಪಾಗಿ… ಹಸಿರಾಗಿ…
ಬಸಿರಾಗಿ… ಮಡಿಲು
ತುಂಬಿಕೊಳ್ಳುವಾಸೆ
ಈ ಇಳೆಗೋ
ಸಿರಿ ಸಂಭ್ರಮ
ಮಿಂಚನ್ನೇ ವಾಡ್ಯಾಣವಾಗಿಸಿ
ವೈಯಾರಿಯಾಗಿಬಿಡುವ
ಬಿರು ಅಹಮಿಕೆ
ವರ್ಷದ ಹನಿಗಳು
ಸ್ಪರ್ಶಸಿದರೆ ಮಾತ್ರವೇ
ಅರಳುವ ಕಾನನ
ಹೂ ಬಳ್ಳಿಗೂ
ನಿನದೇ ನೆನಹಿಕೆ
ಮೊದಲ ಹನಿ
ಕಡಲಾಳವ ಚುಂಬಿಸಿ
ಸ್ವಾತಿ ಮುತ್ತಾದ ಮುತ್ತುಗಳ
ಹಾರವ ಮಾಡಿ ತನ್ನೊಳಗೊಂದಾಗಲು
ಬರುತಿಹ ನದಿಗೆ ಮಾಲೆಯಾಗಲು
ಸಮುದ್ರರಾಜನ ಹಪಹಪಿಕೆ
ಗಂಗೆಯೇ…..
ಅರೆಕ್ಷಣವಾದರೂ
ಪರಶಿವನೊಂದಿಗೆ
ಮುನಿದು ಬಾ
ಇಳೆಗೆ ಮತ್ತೊಮ್ಮೆ
ಬಸಿರಾಗುವ ಬಯಕೆ
-ಡಾ. ಸಿ. ನಂದಿನಿ, ಬೆಂಗಳೂರು
—–