ಅಮ್ಮಾ ಎಂದರೆ…
ಎಣ್ಣಿ ಹಚ್ಚಿ ತಲೆ ತಟ್ಟಿ
ಮೆದುಳನು ಹದಮಾಡಿದವಳು
ಕಣ್ಣು ಹುಬ್ಬನು ತೀಡಿ
ದೃಷ್ಟಿಗೆ ಸೃಷ್ಟಿ ತೋರಿಸಿದವಳು.
ಅಮ್ಮಾ ಎಂದರೆ..
ಜೋಗುಳ ಕಿವಿಗೆ ಕೇಳಿಸಿ
ಜಗಕೆ ಜ್ಯೋತಿಯಾಗೆಂದವಳು
ನಾಲಿಗೆಗೆ ನುಡಿವುದ ಕಲಿಸಿ
ಅದಕೆ ಹಿತ ಮಿತದ ಮದ್ದಿಟ್ಟವಳು
ಅಮ್ಮಾ ಎಂದರೆ..
ಎದೆಯ ಅಮೃತ ಉಣಿಸಿ
ಹೃದಯ ಮೆದುಗೊಳಿಸಿದವಳು
ಮೈಗೆ ಅರಿವೆಯ ತೊಡಿಸಿ
ಮನಕೆ ಅರಿವಿನ ಗುರುವಾದವಳು
ಅಮ್ಮಾ ಎಂದರೆ..
ಕೈ ಕಾಲುಗಳನು ನೀವಿ
ನೆಟ್ಟಗೆ ನಡೆಯುವುದ ಕಲಿಸಿದವಳು
ಹಾದಿಯ ಮುಳ್ಳು ತೆಗೆದು
ಬಾಳ ದಾರಿಗೆ ನಗೆ ಹೂಗಳ ಹಾಸಿದವಳು
ಅಮ್ಮಾ ಎಂದರೆ..
ಬಸಿರಲೇ ಉಸಿರ ನೀಡಿ
ನಮ್ಮ ಹೆಸರಿಗೆ ತನ್ನುಸಿರ ಬಸಿದವಳು
ನಮ್ಮ ಬಾಳು ಹಸಿರಾಗಿಸಲು
ತಾನೇ ಕರಗಿ ಮಳೆಯಾಗಿ ಸುರಿದವಳು.
-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.
🙏🙏🙏🙏