ಅನುದಿನ ಕವನ-೧೨೧೧, ಕವಿ: ಡಾ. ಗೋವಿಂದರಾಜ ಆಲ್ದಾಳ, ಕವನದ ಶೀರ್ಷಿಕೆ:ಮೈ ಮನದ ಸುಳಿಯಲ್ಲಿ…..

ಮೈ ಮನದ ಸುಳಿಯಲ್ಲಿ…..

ಶಶಿ ತೋರುಬೆರಳು ಮೊಗ್ಗಿನ ಮೈಸವರಿದಾಗ
ಹೂವಿನ ಘಮಲು ಮೂಡುತ್ತಿತ್ತು !
ಕನ್ಯೆಯ ಕುಡಿನೋಟ ಬೆಳದಿಂಗಳ ಬಿದ್ಹಾಂಗ
ಬೆವರಿನ ಪರಿಮಳ ಹರಡುತ್ತಿತ್ತು ! -೧ –

ಕೆನ್ನೆಯ ಕನ್ನಡಿಗೆ ಹರೆಯ ನಸುನಗೆ ಕಾಡಿದರೆ
ಕಣ್ಣಾನ ಗೊಂಬೆ ಮರಗುತ್ತಿತ್ತು !
ಎಳೆಬಿಸಿಲು ಸುಳಿಗಾಳಿ ಎದೆಕಟ್ಟು ಅಪ್ಪಿದರ
ಬಿಳಿಮೋಡಕ ದಿನವ ತುಂಬುತ್ತಿತ್ತು !-೨ –

ಬನದ ಬಳ್ಳಿಯ ಹೂವಿಗೆ ದುಂಬಿಯ ಕಚ್ಗುಳಿ
ಮೂಡಲ ಕನ್ನಡಿಯೊಳಗ ಮೂಡುತ್ತಿತ್ತು !
ಮನದಾನ ದಣಿವಿಗೆ ಬಿಳಿ ಮೋಡ ಮಗ್ಗಲದಿ
ಕನಸಿನ ಬಯಕೆಗೆ ಪ್ರೀತಿ ಹಂಚುತ್ತಿತ್ತು ! -೩ –

ಮೂಡಲದ ಅಂಗಳದಿ ಚುಕ್ಕಿಯ ಚಿನ್ನಾಟ
ಮುಸಿಕಿನ ಪಿಸು ನುಡಿ ಕೇಳುತ್ತಿತ್ತು !
ಬಿಳಿ ಮೋಡ ವೈಯಾರ ಬಳುಕಿ ನುಲಿವಾಗ
ಬನದಾನ ಕಬ್ಬಕ್ಕಿ ಸ್ವರವೆತ್ತಿ ಹಾಡುತ್ತಿತ್ತು!-೪-


-ಡಾ. ಗೋವಿಂದರಾಜ ಆಲ್ದಾಳ
—–