ರುದ್ರಾಂಬಾ ಎಂ.ಪಿ. ಪ್ರಕಾಶ್ ವಿಧಿವಶ: ಸಿಎಂ ಸಂತಾಪ

ಹೂವಿನ ಹಡಗಲಿ, ಏ.29: ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್ ಅವರ ಪತ್ನಿ ಎಂ.ಪಿ. ರುದ್ರಾಂಬಾ(83) ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಸಂಜೆ ನಿಧನರಾದರು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಾಂಬಾ ಅವರು ಪುತ್ರಿಯರಾದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಸಮಾಜ ಸೇವಕಿ ವೀಣಾ ಮಹಾಂತೇಶ್, ರಂಗಭಾರತಿ ಅಧ್ಯಕ್ಷೆ ಸುಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಾಜಿ ಶಾಸಕ, ಏಕೈಕ ಪುತ್ರ ಎಂ. ಪಿ ರವೀಂದ್ರ ಅವರು ನಾಲ್ಕು ವರ್ಷಗಳ ಹಿಂದೆ  ಅಕಾಲಿಕವಾಗಿ‌ ವಿಧಿ ವಶರಾಗಿದ್ದಾರೆ.                     ಹೂವಿನ ಹಡಗಲಿಯಲ್ಲಿ ಮಂಗಳವಾರ ಸಂಜೆ 4.30 ಕ್ಕೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಯುತ್ತಿದೆ. ದಿ.‌ ಎಂ.ಪಿ. ಪ್ರಕಾಶ್‌ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿಎಂ ಸಿದ್ದರಾಮಯ್ಯ ಸಂತಾಪ

ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ರುದ್ರಾಂಬಾ ಅವರು ತಮ್ಮ ಪತಿಯ ಆದರ್ಶಗಳನ್ನು ಪಾಲಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನೊಂದ ಜನರ ಬದುಕಿಗೆ ಬೆಳಕಾಗಿದ್ದವರು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.