ಬಳ್ಳಾರಿ, ಮೇ 4: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎರಡು ಮೂರು ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್.ಪಿ) ಅಭ್ಯರ್ಥಿಗಳು ವಿಜಯ ಸಾಧಿಸಲಿದ್ದಾರೆ ಎಂದು ಬಿಎಸ್.ಪಿ ರಾಜ್ಯ ಸಂಯೋಜಕ ಕೃಷ್ಣಮೂರ್ತಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಶನಿವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಬಿಜೆಪಿ ಪಕ್ಷಗಳ ನಂತರ ದೇಶದ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಎಸ್.ಪಿ ಬಗ್ಗೆ ರಾಜ್ಯದ ಮತದಾರರಿಂದ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಮತ್ತು ಬಿಜೆಪಿ ಪಕ್ಷದ ಹಿರಿಯ ಮುಖಂಡರಾಗಿದ್ದ ಸುಷ್ಮಾ ಸ್ವರಾಜ್ಯ ಅವರು ಸ್ಪರ್ಧಿಸಿ ಗಮನ ಸೆಳೆದಿದ್ದರೂ ಅಖಂಡ ಬಳ್ಳಾರಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಗಣಿಗಾರಿಕೆ, ಮರಳುಗಾರಿಕೆಯನ್ನು ಪ್ರಭಾವಿತ ಜನಪ್ರತಿನಿಧಿಗಳೇ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಆಧುನಿಕ ಆಸ್ಪತ್ರೆಗಳು ನಿರ್ಮಾಣವಾಗಿಲ್ಲ. ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ. ಬರ, ಕಡು ಬಿಸಿಲಿನಿಂದ ಜನರ ಬದುಕು ಜರ್ಝಿತಗೊಂಡಿದೆ ಎಂದರು.
ನೈಸರ್ಗಿಕ ಸಂಪತ್ತನ್ನು ಲೂಟಿಮಾಡಿರುವ
ಕಾಂಗ್ರೆಸ್ ಮತ್ತು ಬಿಜೆಪಿಗಳು ಅಖಂಡ ಬಳ್ಳಾರಿ ಜನತೆಗೆ ಚೆಂಬು, ಚಿಪ್ಪು ನೀಡಿವೆ ಎಂದು ಟೀಕಿಸಿದರು.
ಈ ಎರಡು ಪಕ್ಷಗಲ ಜನ ವಿರೋಧಿ, ನೀರಸ ಆಡಳಿತ ನೋಡಿರುವ ಮತದಾರರು ಈ ಬಾರಿ ಬಿಎಸ್.ಪಿ ಬಗ್ಗೆ ಒಲವು ತೋರುತ್ತಿದ್ದಾರೆ ಎಂದು ಕೃಷ್ಣಮೂರ್ತಿ ತಿಳಿಸಿದರು.
ಬಿಎಸ್.ಪಿ ರಾಜ್ಯ ಉಪಾಧ್ಯಕ್ಷ ಹಾಸನದ ಗಂಗಾಧರ ಬಹುಜನ್ ಮಾತನಾಡಿ, ರಾಜಕೀಯ ವ್ಯಾಪಾರಿ ಕ್ಷೇತ್ರವಾಗಿ ಬದಲಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಏಕೈಕ ಪಕ್ಷವೆಂದರೆ ಬಿಎಸ್.ಪಿ ಎಂದು ಹೇಳಿದರು.
ಜೆಡಿಎಸ್ ಗೆ ಇದು ಕೊನೆಯ ಚುನಾವಣೆ. ಹಾಸನ ಎಂಪಿ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ಗೊತ್ತಿದ್ದು ಬಿಜೆಪಿ ಇವರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಜನವರಿ ಯಲ್ಲೇ ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದರೂ ಲಜ್ಹೆಗೇಡಿ ಜೆಡಿಎಸ್ ನೊಂದಿಗೆ ಏಕೆ ಮೈತ್ರಿ ಮಾಡಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಏಕೆ ಪ್ರಚಾರಕ್ಕೆ ಬರಬೇಕಿತ್ತು ಎಂದು ಗಂಗಾಧರ ಪ್ರಶ್ನಿಸಿದರು.
ಅಧಿಕಾರವನ್ನು ದುರುಪಯೋಗಿಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪಕ್ಷದ ಅಭ್ಯರ್ಥಿ ವಾಲ್ಮೀಕಿ ಕೃಷ್ಣಪ್ಪ ಮಾತನಾಡಿ ಜನಪರ ಆಡಳಿತಕ್ಕಾಗಿ ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಸ್.ಪಿ ಜಿಲ್ಲಾಧ್ಯಕ್ಷ ಹೆಚ್. ಮುನಿಸ್ವಾಮಿ, ರಾಜ್ಯ ಕಾರ್ಯದರ್ಶಿ ಮಹಮದ್ ಅಲಿ, ಮುಖಂಡರಾದ ಉಮಾಪತಿ, ಶಕುಂತಲಾ ಮತ್ತಿತರರು ಇದ್ದರು.
——