ನೀನೆಂದರೇ ಹಾಗೆ
ನೀನೆಂದರೇ ಹಾಗೆ
ಕಪ್ಪೆಚಿಪ್ಪೊಂದು ತನ್ನೊಳಗೇ
ಮುತ್ತನ್ನು ಸೃಷ್ಟಿಸಿದ ಹಾಗೆ
ನೀನೆಂದರೇ ಹಾಗೆ
ನೆಲದೊಳಗಿನ ಬೀಜವೊಂದು
ತನ್ನೊಳಗೇ ಬೆಳೆದು
ಹೆಮ್ಮರವಾದಂತೆ
ನೀನೆಂದರೇ ಹಾಗೆ
ಮೋಡವೊಂದು
ಕಡಲಿನ ಒಡಲ ಹೊತ್ತು
ತೇಲಿ ಬಂದಂತೆ
ನೀನೆಂದರೇ ಹಾಗೆ
ಮೊಗ್ಗೊಂದು ಮೈಮುರಿದು
ಸುಗಂಧ ಹರಡಿದ ಹಾಗೆ
ನೀನೆಂದರೆ ಹಾಗೆ
ನಿದ್ದೆಯೊಳಗಿನ ಕನಸೂ ಕೂಡ
ಕನಸನ್ನು ಕಟ್ಟಿಕೊಂಡ ಹಾಗೆ
ನೀನೆಂದರೆ ಹಾಗೆ
ನಡೆವ ದಾರಿಯೂ
ರೋಮಾಂಚನಗೊಂಡು
ಇಕ್ಕೆಲಗಳಲ್ಲಿ ಹೂಗಳನರಳಿಸಿದ ಹಾಗೆ
-ಸಿದ್ಧರಾಮ ಕೂಡ್ಲಿಗಿ
—–