ಬಳ್ಳಾರಿ, ಮೇ 5: ಈ ಬಾರಿಯ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವ ಉಳಿವಿನ, ಸಂವಿಧಾನ ಸಂರಕ್ಷಣೆಯ ಚುನಾವಣೆ ಎಂದು ಜಾಗೃತ ನಾಗರೀಕರು, ಕರ್ನಾಟಕ ವೇದಿಕೆಯ ಮುಖಂಡರೂ, ಹಿರಿಯ ಸಾಹಿತಿ ಪ್ರೊ.ಎಸ್.ಜಿ ಸಿದ್ಧರಾಮಯ್ಯ ತಿಳಿಸಿದರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದ್ವೇಷ ರಾಜಕಾರಣ ತುಂಬಿ ತುಳುಕುತ್ತಿರುವ ಈ ಹೊತ್ತಿನಲ್ಲಿ ದೇಶದ ಸಂವಿಧಾನ ಮತ್ರು ಪ್ರಜಾಪ್ರಭುತ್ವ ಅಪಾಯ ಸ್ಥಿತಿಯಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಬಹುತ್ವ ಭಾರತದ ಸೌಹಾರ್ದತೆಗೆ ಧಕ್ಕೆ ಒದಗಿದೆ. ಸಮಾಜವನ್ನು ಧರ್ಮ, ಭಾಷೆ, ಜಾತಿಗಳ ಹೆಸರಿನಲ್ಲಿ ಒಡೆಯುವುದನ್ನು ತಡೆಗಟ್ಟುವ ಅನಿವಾರ್ಯತೆ ಇದ್ದು, 2024ರ ಚುನಾವಣೆ ದೇಶದ ಗಣತಂತ್ರ ವ್ಯವಸ್ಥೆ ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಈ ಕಾರಣದಿಂದ ಮತದಾರ ಬಂಧುಗಳು ಯಾವುದೇ ಭಾವನಾತ್ಮಕ ಆವೇಶಗಳಿಗೆ ಬಲಿಯಾಗದೇ ವಿವೇಕಶಾಲಿಗಳಾಗಿ ಮತ ಚಲಾಯಿಸುವ ಅಗತ್ಯವಿದೆ ಎಂದರು.
ಕೇಂದ್ರ ಸರಕಾರ ರಾಜ್ಯದ ಹಕ್ಕು, ತೆರಿಗೆ ಪಾಲು ನೀಡದೇ ವಂಚಿಸುವ ಮೂಲಕ ಜನ ವಿರೋಧಿ ನೀತಿ ಅನುಸರಿಸಿತು. ಸುಪ್ರೀಂ ಕೋರ್ಟ್ ಚಾಟಿಬೀಸಿದ ಬಳಿಕ ಎಚ್ಚೆತ್ತುಕೊಂಡಿತು. ಈ ನಿಟ್ಟಿನಲ್ಲಿ ರಾಜ್ಯದ ಹಕ್ಕನ್ನು ಕಸಿಯುತ್ತಿರುವವರ ವಿರುದ್ಧ ಕನ್ನಡ ನಾಡಿನ ಜನತೆ ನಿಲ್ಲಬೇಕಿದೆ ಎಂದು ಪ್ರೊ. ಸಿದ್ಧರಾಮಯ್ಯ ಹೇಳಿದರು.
ನಾಡಿನ ಪ್ರಜ್ಞಾವಂತ ಮತದಾರರು ದ್ವೇಷ ಬಿತ್ತುವ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ವಿಮಲಾ ಎಸ್. ಅವರು ಮಾತನಾಡಿ, ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಕಂಡರಿಯದ ಮಹಿಳಾ ದೌರ್ಜನ್ಯ ಮಿತಿಮೀರಿ ನಡೆದಿವೆ. ಮಣಿಪುರ, ಹಾಸನದ ಘಟನೆಗಳು ಇದಕ್ಕೆ ಸಾಕ್ಷಿ. ಮಹಿಳೆಯರ ಪರಿಸ್ಥಿತಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ ಎಂದು ದೂರಿದರು.
ಪ್ರಧಾನಿ ಮೋದಿ ಅವರು ದೇಶದಲ್ಲಿ ತಾಂಡವಾಡುತ್ತಿರುವ ಬಡತನ, ನಿರುದ್ಯೋಗದ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಸಾಹಿತಿ ಡಾ. ವಸುಂಧರ ಭೂಪತಿ ಮಾತನಾಡಿ, ಕಳೆದ 10 ವರ್ಷಗಳಲ್ಲಿ 88 ಲಕ್ಷ ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ. ಮಹಿಳೆಯರ ಆತ್ಮಹತ್ಯೆಗಳು ಶೇ. 137ರಷ್ಟು ಹೆಚ್ಚಾಗಿವೆ. ರೈತ ಮಹಿಳೆಯರು, ಮಹಿಳಾ ಕಾರ್ಮಿಕರು ಅತೀವ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವುದಕ್ಕೆ ಕೇಂದ್ರಸರಕಾರದ ಮಹಿಳಾ ವಿರೋಧಿ ನೀತಿಗಳೇ ಕಾರಣ ಎಂದು ಆರೋಪಿಸಿದರು.
ದೇಶದಲ್ಲಿ ಶೇ. 50ರಷ್ಟಿರುವ ಮಹಿಳೆಯರು ಈಬಾರಿಯ ಚುನಾವಣೆಯಲ್ಲಿ ಅತಿ ಎಚ್ಚರಿಕೆ, ವಿವೇಕಯುತವಾಗಿ ಮತ ಚಲಾಯಿಸಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ತಾನೆಂದಿಗೂ ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಸಾರಿಕೊಂಡು ಅಧಿಕಾರಕ್ಕೆ ಇದೀಗ ಚುನಾವಣಾ ಬಾಂಡ್ ಹೆಸರಿನಲ್ಲಿ ಭ್ರಷ್ಟಾಚಾರವನ್ನಣೆ ಕಾನೂನು ಬದ್ಧಗೊಳಿಸಿದ ಬಿಜೆಪಿ ಮತ್ತು ಮುಖಂಡರ ವಿರುದ್ಧ ನಾಡಿನ, ದೇಶದ ಜನತೆ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.
ಮತದಾರರು ವಿಶೇಷವಾಗಿ ಯುವ ಜನತೆ ಆವೇಶದ ಭಾಷಣಗಳಿಗೆ ಮಾರುಹೋಗದೇ ವಿವೇಕಶಾಲಿಗಳಾಗಿ ಮತಚಲಾಯಿಸ ಬೇಕು ಎಂದು ಕೋರಿದರು.
ಭಯ, ಅತಂಕ, ಆಮಿಷಗಳನ್ನು ಗೆದ್ದು ಪ್ರಜಾಪ್ರಭುತ್ವದ ಶಕ್ತಿ ನಮ್ಮ ಮತದಾನದ ಶಕ್ತಿ ಎಂಬ ಅರಿವಿನಲ್ಲಿ ಮತಚಲಾಯಿಸುವ ಮೂಲಕ ಸಂವಿಧಾನವನ್ನು ರಕ್ಷಿಸೋಣ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕವಿಗಳಾದ ಅಬ್ದುಲ್ ಹೈ ತೋರಣಗಲ್ಲು, ಪಿ ಆರ್ ವೆಂಕಟೇಶ, ಹಿರಿಯ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಪಿ.ಗಾದೆಪ್ಪ, ಕುಡುತಿನಿ ರಾಮಾಂಜನೇಯ, ಮಾನವ ಬಂಧುತ್ವ ವೇದಿಕೆಯ ಸಂಗನಕಲ್ಲು ವಿಜಯಕುಮಾರ್, ಕಪ್ಪಗಲ್ಲು ಓಂಕಾರಪ್ಪ ಮತ್ತಿತರರು ಉಪಸ್ಥಿತರಿದ್ದರು.
——