ಅನುದಿನ ಕವನ-೧೨೨೩, ಕವಯಿತ್ರಿ: ಮಮತಾ ಅರಸೀಕೆರೆ., ಕವನದ ಶೀರ್ಷಿಕೆ: ಸಾಕಾಯ್ತು‌ ನನಗೆ

ಸಾಕಾಯ್ತು ನನಗೆ….

ನೀನು ಹೂವಾಗಿ ಸೋಕಬಹುದಿತ್ತು
ಗಂಧವಾಗಿ ಸವರಬಹುದಿತ್ತು.
ಗಾಳಿಯಲ್ಲಿ ಸುಳಿದಾದರೂ ಸ್ಪರ್ಶವಾಗಬಹುದಿತ್ತು.
ಕಣ್ಣಗಳಲ್ಲಾದರು ನೆನಪುಗಳ ಕನವರಿಕೆಯಾಗಬಹುದಿತ್ತೇನೊ.

ನೀನು ಅಕಾಲಿಕ ಮಳೆಯಾಗಿಯಾದರೂ ಎದೆಯೊಳಗೆ ಮಣ್ಣ ಕಂಪನ್ನು ಆವಿಯಾಗಿಸಬಹುದಿತ್ತು.
ತೂಗುಮಂಚದೊಳಗೆ ಮಲಗಿ ಮೈಮರೆಸುವ ಅಮಲಿಗೆ ನಿನ್ನ ತೆಕ್ಕೆಯೊಳಗೆ ಅಡಗಿ ಉಯ್ಯಾಲೆಯಾಡಿಸುವ ಬೇಷರತ್ತು ವಾಗ್ದಾನ ನೀಡುವುದು ಎಂದಿಗೆ ಹೇಳು?
ನರಳು ಪುಳಕದ ರಂಗಿನೋಕುಳಿಯೊಳಗೆ ಅದ್ದಿ ಅದ್ದದ್ದಿ ಮುಳುಗೇಳಿಸುವುದು ಯಾವಾಗ?
ಮದದ ಮುದ್ದು ನೆರಳಿನಡಿಯಲ್ಲಿ ಗದ್ದಕ್ಕಾನಿಸಿ ಕಾಯ್ದ ಕಳಶದ ಅಮೃತ ಹೀರುವ ಉಮೇದಿಲ್ಲವಾ ನಿನಗೆ!

ಸಾಕಾಯ್ತು ನನಗೆ, ಕನಸಿನ ಇರುಳ ತಿವಿತಕ್ಕೆ ವಶವಾಗಿರುವೆ.
ನಿನಗೆ ಬೇಕಾಗುವ ವಿಳಾಸದ ಸಮಯ ತಿಳಿಸು
ಯುಗಾಂತ್ಯದ ಆ ತುದಿಗೆ ಕದವಿಕ್ಕಿ ಗುಲ್ ಮೊಹರ್ ಹಾಸಿ ಬರುವೆ

-ಮಮತಾ ಅರಸೀಕೆರೆ
—–