ಎಲ್ಲೋ ಬಿದ್ದ ಬೀಜ ನಾನು
ಕಲ್ಲು ಪೊಟರೆಗಳ ನಡುವಿಂದ ಸದ್ದಿಲ್ಲದೆ
ಮೊಳಕೆ ಹೊಡೆದು ಚಿಗುರಿಕೊಂಡೆ
ಚಿವುಟುವವರ ನಡುವೆಯೂ
ತೋಳುಗಳರವಿ ನೀರು-ನಿಡಿ
ಇಲ್ಲದೆ ಜೀವ ತುಂಬಿಕೊಂಡೆ
ನಡು ನಡುವೆ ಆಡು ಕುರಿಗಳಿಗೂ
ಕುಡಿಗಳರ್ಪಿಸಿ, ಮೆಲ್ಲೆನೆ ಗೆಲ್ಲುಗಳರಡಿದೆ
ಜೋಕಾಲಿ ಜೀಗಿ ಗೆಲ್ಲುಗಳ ಮುರಿದವರಿಗೂ
ಯಾವ ವರ್ಣ ಭೇದಗಳನೂ
ಮಾಡದೆ, ನೆರಳಾದೆ …. ಗೂಡಾದೆ
ಮರವಾದೆ….ನೆಲದ ಕುಡಿಯಾದೆ
ಕಲ್ಲು ಹೊಡೆದು ಕೊಂಬೆಗಳಲುಗಿಸಿದವರ
ಮಡಿಲ ತುಂಬ ಹೂ ಹಣ್ಣನಿತ್ತೆ
ಯಾರೆಷ್ಟೇ ಹಿಂಸಿಸಿದರೂ ಪ್ರತಿಕಾರಕೆ
ಹಾತೊರೆಯಲಿಲ್ಲ, ಗಾಯವಾದರೂ
ನೆತ್ತರ ಹರಿಸಲಿಲ್ಲ, ಚೀರಲಿಲ್ಲ
ದೂರು ದಾಖಲಿಸಲಿಲ್ಲ
ಕೊಡಲಿಯ ಪೆಟ್ಟಿಗೆ ತತ್ತರಿಸಿದರೂ
ಮುನಿದು ಬಾಡಲಿಲ್ಲ ,
ಪ್ರತಿಯಾಗಿ ಬುಡದಿಂದ ಕೊನರಿದೆ,
ಬೇರುಗಳ ಆಳದಲಿ ಬಿಟ್ಟು ಮತ್ತೆ ಉಸಿರಾದೆ
ಆದರೂ ನೀನು ನನ್ನ ರೂಹುಗಳ
ಕತ್ತರಿಸುವುದ ನಿಲ್ಲಿಸಲಿಲ್ಲ
-ವಸು ವತ್ಸಲೆ, ಬೆಂಗಳೂರು
—–