ಅನುದಿನ ಕವನ-೧೨೨೮, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ., ಕವನದ ಶೀರ್ಷಿಕೆ: ಸುಖ

ಸುಖ

ಸತ್ಯವನ್ನೇ ಮುಚ್ಚಿಹಾಕುವುದಾದರೆ ಬರಿ ಸುಳ್ಳಿನೊಳಗೆ ಏನು ಸುಖವಿದೆ ಹೇಳು||
ಪ್ರೀತಿಯನ್ನೇ ಕಟ್ಟಿಹಾಕುವುದಾದರೆ ಬರಿ ದ್ವೇಷದೊಳಗೆ ಏನು ಸುಖವಿದೆ ಹೇಳು||

ಮುದ ತುಂಬಿದ ಎದೆಯ ಗೂಡಲ್ಲಿ ನಿತ್ಯ ಒಲವಿನೋಕುಳಿ|
ಭಾವಗಳನ್ನೇ ಕೊಲ್ಲುವುದಾದರೆ ಬರಿ ಭೋಗದೊಳಗೆ  ಏನು ಸುಖವಿದೆ ಹೇಳು||

ಕೂಡಿ ಉಂಡುಟ್ಟು ನಗು ನಗುತ ಕಾಲ ಕಳೆಯುವುದು ಸ್ವರ್ಗಕ್ಕೆ ಸಮಾನ|
ನೋವುಗಳನ್ನೇ ನುಂಗುವುದಾದರೆ ಬರಿ ನಂಜಿನೊಳಗೆ  ಏನು ಸುಖವಿದೆ ಹೇಳು||

ಎಷ್ಟು ಸುಟ್ಟರೇನು ಗುಣ ಕಳೆದುಕೊಂಡೀತೆ ಬೆಂಕಿಗೆ ಹಾಕಿದ ಬಂಗಾರ|
ನಿಜವನ್ನೇ ಮರೆಮಾಚುವುದಾದರೆ ಬರಿ ಕಟ್ಟುಕತೆಯೊಳಗೆ  ಏನು ಸುಖವಿದೆ ಹೇಳು||

‘ಗಟ್ಟಿಸುತ’ ಈಗೀಗ ವಿಶ್ವಾಸ ಎನ್ನುವುದು ಮುಷ್ಠಿಯೊಳಗೆ ಹಿಡಿದ ಜೀವ|
ನಂಬಿಗೆಯನ್ನೇ ಸಂದೇಹಿಸುವುದಾದರೆ ಬರಿ ಬೂಟಾಟಿಕೆಯೊಳಗೆ  ಏನು ಸುಖವಿದೆ ಹೇಳು||

-ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳಗಾವಿ ಜಿ.
——