ಅನುದಿನ‌ ಕವನ-೧೨೩೧, ಕವಿ: ಎ.ಎನ್.ರಮೇಶ್.ಗುಬ್ಬಿ.

“ಇಲ್ಲಿವೆ ಮೂರು ಸಾಲಿನ ಆರು ಹನಿಗವಿತೆಗಳು. ಬದುಕಿನ ಅಂಗಳಕೆ ನೂರಾರು ಭಾವಾರ್ಥಗಳ ಬೆಳಕು ಚೆಲ್ಲುವ ಅಕ್ಷರಪ್ರಣತೆಗಳು. ಇಲ್ಲಿ ಆಳಕ್ಕಿಳಿದಷ್ಟೂ ನಮ್ಮ-ನಿಮ್ಮದೇ ಬದುಕು-ಬೇಗುದಿಗಳ ಅನಾವರಣವಾಗುತ್ತದೆ. ಪ್ರಸಕ್ತ ವಿದ್ಯಮಾನಗಳ ವಿಕಾರ-ವಿಕೃತಿಗಳ ವಿಶ್ವದರ್ಶನವಾಗುತ್ತದೆ. ಬೆಳಕು-ಬೆಂಕಿಯ ಆಂತರ್ಯಗಳ ಸಾಕ್ಷಾತ್ಕಾರವಾಗುತ್ತದೆ. ಬದುಕು ಬೆಂಕಿಯಾಗದೆ ಬೆಳಕಾದರಷ್ಟೆ ಬಾಳು ಸಾರ್ಥಕ್ಯ. ಜೀವ-ಜೀವನಗಳ ಸಾಫಲ್ಯ. ಇದುವೆ ಯುಗ ಯುಗದ ಜಗದ ಚಿರ ಚಿರಂತನ ನಿತ್ಯ ಸತ್ಯ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

 

1. ಕಿಚ್ಚು..!

ನಿತ್ಯ ಎಲ್ಲೆಡೆ ಬೆಂಕಿ ಹಾಕುವುದರ ಬದಲು
ಎದೆಗಿಷ್ಟು ನೀರು ಸುರಿದುಕೊ ಮೊದಲು
ಬರುತಿದೆ ಹೃದಯ ಸುಟ್ಟ ಕೆಟ್ಟ ಘಮಲು.

2. ಕುಯುಕ್ತಿ.!

ಬೆಳಕಿಗೆ ಬಂದರೆ ಬೆತ್ತಲಾಗುತ್ತೇವೆಂದು ಅರಿತವರೆ
ಸದಾ ಕತ್ತಲಲ್ಲಿಯೆ ನಿಂತು ಕಲ್ಲು ಹೊಡೆಯುವುದು
ಕಾಣಿಸಿಕೊಳ್ಳದೆ ಕಾಲೆಳೆಯುತ್ತ ಕಾಲ ಕಳೆಯುವುದು.!

3. ಕಂಟಕ.!

ಅಪ್ಪಿತಪ್ಪಿಯೂ ಬೆಳದಿಂಗಳಾಗಬೇಡಿ
ಅಯೋಗ್ಯರ ಬದುಕು ಬೇಗುದಿಗೆ
ನಿಮ್ಮನ್ನೇ ತಂದು ನಿಲ್ಲಿಸುವರು ಬೀದಿಗೆ.!

4. ಕಂಗಾಲು.!

‘ಬೆಳಕಾಗುತ್ತೇನೆ’ ಎಂದವರೆಲ್ಲ ಬೆಂಕಿಯಾದದ್ದೆ ಹೆಚ್ಚು
ಬೆಳಗುತ್ತೇನೆಂದು ಬಂದವರೆಲ್ಲ ಬೆಂಕಿಯಿಟ್ಟಿದ್ದೆ ಹೆಚ್ಚು
ಬೆಳಕೆಂದರೀಗ ಬದುಕು ಹೆದರಿ ಬೀಳುವುದು ಬೆಚ್ಚು.!

5. ಕಾಂತೀಯತೆ.!

ವಿನಾಕಾರಣ ಮತ್ಸರದಿ ನೀವುರಿದು ನನ್ನುರಿಸಿದಷ್ಟು
ಪ್ರಜ್ವಲಿಸಿ ಬೆಳಗುವುದು ನನ್ನೊಳಗಣ ಪ್ರೀತಿಜ್ಯೋತಿ
ಪಸರಿಸುತ್ತ ನಿಮ್ಮೆದೆಗೂ ಅಕ್ಕರೆ ಮಮತೆಯ ಕಾಂತಿ.!

6. ಕಟುಸತ್ಯ.!

ಬೆಳಕಾದರಷ್ಟೆ ಗೆಳೆಯ ಬುವಿಯ ಸಲಾಮು
ಬೆಂಕಿಯಾದರೆ ಬರೀ ಬೂದಿಯೆ ಇನಾಮು
ಸುಟ್ಟ ಹೃದಯಕೂ ಸಿಗದಿಲ್ಲಿ ಮುಲಾಮು.!

-ಎ.ಎನ್.ರಮೇಶ್.ಗುಬ್ಬಿ.