ಕೊಟ್ಟೆ ಮೆಟ್ಟಿತೇ
ಭೋಗ ಭಾಗ್ಯವೆಲ್ಲ ಬಲ್ಲ
ಭಾಗ್ಯಧಾತನಿತ್ತನಲ್ಲ
ಯೋಗವಿರದ ಹಳ್ಳಕೇಕೆ ಜೋಗದೋಗ್ಯತೆ|
ಈಗಲೀಗ ಹೊಟ್ಟೆಕಿಚ್ಚು
ರಾಗ ದ್ವೇಷವೆಲ್ಲ ಬಿಟ್ಟು
ಬೀಗದಂತೆ ಬಾಗಿದಾಗಲದುವೆ ಯೋಗ್ಯತೆ||
ಆನುತಾನುಯೇನದೇನು
ನಾನುಯೆಂಬ ಹೇನು ನೀನು
ಭಾನಿನಂತೆ ಬಾನತುಂಬ ಚೆಲ್ಲು ಬೆಳಗನು|
ಕಾಣದಂತ ಸಕಲ ಸಿದ್ಧಿ
ಕಾಣ್ವೆಯಾಗ ತಿಳಿಯೊ ಲದ್ಧಿ
ಬಾಣ ಬಿಲ್ಲು ಬೇಡವಂತೆ ತಿಳಿಯೆ ಜಗವನು||
ಅಟ್ಟ ಬೆಟ್ಟ ಕೊಟ್ಟರೆಷ್ಟು
ಚಟ್ಟಕಿಟ್ಟು ಸುಟ್ಟರೆಷ್ಟು
ಲೊಟ್ಟೆ ನಟ್ಟಿ ಕೆಟ್ಟ ಲಟ್ಠ ಮಟ್ಟ ಮುಟ್ಟಿತೇ|
ಅಟ್ಟುಬೆಣ್ಣೆಯಿಟ್ಟರೇನು
ದಿಟ್ಟಿದೊಣ್ಣೆಯಷ್ಟೆ ಕಾಣ
ಚಟ್ಟೆ ತೊಟ್ಟ ಹೇಂಟೆಯಂತೆ ಕೊಟ್ಟೆ ಮೆಟ್ಟಿತೇ||
[ಲಟ್ಠ=ದಪ್ಪವಾದ, ಲಾಠಿ. – ಅಟ್ಟುಬೆಣ್ಣೆ= ತುಪ್ಪ.
ಲೊಟ್ಟೆ = ಸುಳ್ಳು ಸುಳ್ಳೇ. – ಮಟ್ಟ= ಅಳತೆ.
ನಟ್ಟಿ= ನಷ್ಟ ಹೊಂದಿದವನು.
ಕಾಣ= ಕುರುಡ, ಕಾಗೆ. ದಿಟ್ಟಿ = ದೃಷ್ಟಿ
ಚಟ್ಟೆ ಇಂಗ್ಲಿಷರ ಉಡುಪು. – ಕೊಟ್ಟೆ= ಜಂಬ]
-ಶಿವೈ(ವೈಲೇಶ.ಪಿ.ಎಸ್) ಕೊಡಗು.