ಅನುದಿನ ಕವನ-೧೨೩೪, ಕವಿ: ಆರಿಫ್ ರಾಜಾ, ಇಳಕಲ್, ಕವನದ ಶೀರ್ಷಿಕೆ:ಅರ್ಧಕ್ಕೇ ನಿಂತ ಕವಿತೆ

ಅರ್ಧಕ್ಕೇ ನಿಂತ ಕವಿತೆ

ಒಂದು ಚಿಟ್ಟೆಯ ರೆಕ್ಕೆ
ಬಿರುಗಾಳಿಯ ದಿಕ್ಕು ಬದಲಿಸಬಲ್ಲದು
ಒಂದು ಅಡ್ನಾಡಿ ಶಬ್ದ
ಅರ್ಧಕ್ಕೇ ನಿಂತ ಕವಿತೆಯ
ನಾಡಿ ಹಿಡಿಯಬಹುದೆ?

ಶೋಕವನ್ನು ಹೃದಯದಿಂದ
ಸಾವನ್ನು ಬದುಕಿನಿಂದ
ಅರ್ಥವನ್ನು ಶಬ್ದಗಳಿಂದ
ಅಗಲಿಸಿಬಿಟ್ಟರೆ?

ರೋಷವನ್ನು ನೆತ್ತರಿನಿಂದ
ಹಸಿವನ್ನು ಒಡಲಿನಿಂದ
ಮನುಷ್ಯತ್ವವ ಮನುಷ್ಯನಿಂದ
ಅಗಲಿಸಿಬಿಟ್ಟರೆ?

ಬೆಟ್ಟ ಕಣಿವೆ ಹಳ್ಳ ಕೊಳ್ಳಗಳ ನಡುವಿನಿಂದ
ಬಾಣದಂತೆ ಚಿಮ್ಮಿ ಬರುವ ಕಾಡು ಮಿಕ
ಮತ್ತದರ ಮಾರಣಾಂತಿಕ ರಭಸ
ನಿನ್ನ ಪ್ರೇಮ ಸೌಂದರ್ಯ

ನನ್ನ ಅಹಂಕಾರ ಹೇಳಿತು,ಅದೇನು ಮಹಾ
ಪದವರ್ಣನೆಗಳ ಬಲೆ ಹೆಣೆದು‌
ಕೆಡವಬಲ್ಲೆ
ನಿನ್ನ ಚೆಲುವಿನ‌ ರಹಸ್ಯ‌ ಮೃಗವ

ನನ್ನ ಕಣ್ಣ ಕೊಳದಲಿ ಈಜಾಡುವ
ನಿನ್ನ ಮುಂಗುರುಳ ಮೀನ ಮೇಲಾಣೆ
ಯಾವ ಅಶ್ಲೀಲ ಶಬ್ದಗಳ ಬಲೆಯಿಂದ ಹೆಣೆದರೂ
ಮತ್ತೆ ಮತ್ತೆ ಹರಿದುಕೊಂಡು ಬರುವ
ಮಾಯಾ ಮೃಗವಾಯಿತು ನಿನ್ನ ಸೌಂದರ್ಯ

ಅಗಲಿಸಲೇ ಬೇಕಾಗಿದೆ
ಈ ದುರಿತ ಕಾಲದಲಿ
ಧರ್ಮವನ್ನು ದೇವರಿಂದ
ಕವಿತೆಯನ್ನು ಕವಿಯಿಂದ
ಸ್ವಾರ್ಥವನ್ನು ಸರ್ವಾಧಿಕಾರಿಯಿಂದ

ಹೇಳಲೇ ಬೇಕಾಗಿದೆ
ಈ ದುರಿತ ಕಾಲದಲಿ
ನೈತಿಕವಾದ ತತ್ವ ಶಾಸ್ತ್ರ
ಅನೈತಿಕವಾದರೆ ಧರ್ಮ ಶಾಸ್ತ್ರವೆಂದು
ಇವೆರಡರ ನಡುವೆ
ಉಸಿರಾಡುವುದೇ ಕಾವ್ಯವೆಂದು

ಮತ್ತೂ ಹೇಳಲೇಬೇಕು
ಈ ದುರಿತ ಕಾಲದಲಿ
ತೊದಲು ನುಡಿಗಲಿತ ಮಗುವೊಂದು
ಮೆಲ್ಲ ಮೆಲ್ಲನಡಿಯಿಡುತ್ತಾ
ಕವಿಸೃಷ್ಟಿಸಿದ ರೂಪಕ ಪ್ರತಿಮೆ ಉಪಮೆಗಳಮೇಲೆ
ಹನಿ ಹನಿಯಾಗಿ ಉಚ್ಚೆ ಒಯ್ಯಬಹುದು
ಕವಿತೆಯನ್ನು ದೈವವಾಣಿಯಂತೆ ಪವಿತ್ರಗೊಳಿಸಬಹುದು!

‌‌‌‌‌‌‌ ‌ ‌‌
-ಆರಿಫ್ ರಾಜಾ, ಇಳಕಲ್
—–