ಅನುದಿನ ಕವನ-೧೨೩೫, ಹಿರಿಯ ಕವಿ: ವಿಜಯರಾಘವನ್ ರಾಮಕುಮಾರ್, ಕೋಲಾರ, ಕವನದ ಶೀರ್ಷಿಕೆ:ನನ್ನ ಕುಡಿದ ಕವನ

ನನ್ನ ಕುಡಿದ ಕವನ

ಎಂದೋ ಹೋಗಿಬಿಟ್ಟ
ಮತ್ತು ಚಿರಂತನ ಬದುಕಿರುವ
ನನ್ನ ಪ್ರಿಯ ಗೆಳೆಯನೇ, ನೀನು
ಅಂದಿನ ಆ ನಟ್ಟಿರುಳಿನಲ್ಲಿ
ನಿನಗೆ ನಾನು ಅನನ್ಯ ಗಳಿಗೆಗಳ
ನಮ್ಮಿಂದ ಕಸಿವ ಯಾವುದನ್ನು
ನನಗೆಂದು ತರಬಾರದೆಂದು
ವಿಧಿಸಿದ್ದ ಕಟ್ಟಪ್ಪಣೆಯನ್ನು ಧಿಕ್ಕರಿಸಿ

ನಿನ್ನ ದೀರ್ಘ ಚರಮಗೀತೆಯ
ಜೊತೆ ತಂದಿದ್ದ ಮತ್ತಿಳಿಸುವ
ಕಡುಮಧುವನ್ನು …

ಸಂಜೆಗಳು ಸುಂದರವಾಗುವುದು
ಹೇಗೆ ಎಂದು ಗೊತ್ತಿದ್ದರೂ
ನೀನು ಸಾಕ್ಷಿಯಂತೆ ಕುಳಿತು
ನೋಡುತ್ತಿರುವಂತೆಯೇ
ಮೂರು ಮುಸ್ಸಂಜೆಯ ಕಾಲದಲ್ಲಿ
ನಾನದನ್ನು – ನಿನ್ನ ಆ ಗೀತೆಯಷ್ಟನ್ನೂ
ನಿನ್ನೆದುರೇ ಕುಡಿದುಬಿಟ್ಟೆ

ಏಕಾಂಗಿ ಅದೊಂದು ಬಗೆಯ
ಪಶ್ಚಾತ್ತಾಪದಲ್ಲಿ ಬೇಯುತ್ತ

ನಾನು ಅಂದುಕೊಳ್ಳುತ್ತಿದ್ದೆ, ಬಿಟ್ಟುಕೊಂಡ
ನಿನ್ನ ಚರಮಗೀತೆಯು ನನ್ನೊಳಗೆ
ಹರಡಿ ಶಾಶ್ವತತನವೊಂದನ್ನು
ಆರೋಪಿಸಿಕೊಂಡಂತಾಗಗೊಡದೆ –
ನನ್ನ ಮನದ ಮಾತನ್ನು ನೀನು ಅದೆಷ್ಟು
ಸುಲಭವೆಂಬಂತೆ ನಿನ್ನ ತಾಕಲು ಬಿಡದೆ
ಅನತಿ ದೂರದಲ್ಲೇ ತಡೆದು ನೂಕಿಬಿಟ್ಟೆ.

ನಿನ್ನ ಆಮಿಶಗಳ ಗೆದ್ದು ಬದುಕಬೇಕು
ಆ ಆಮಿಶಗಳೋ ನಿರಾಕರಿಸಲು
ಆಗದವು ಎಂಬಂತಾಗಿ ಜಗದೆತ್ತರ

ನಾನು ಅರಿಯೆ ನಿಜದುದಯದ ಹಾಗೆ
ಅಷ್ಟು ಸುಂದರವಾಗಿ, ಜೀವಜಲದುಂಬಿ
ಅದನ್ನು ಮಾಡಿದ್ದಾದರೂ ಯಾರು?

ಅಂದಿನಿಂದ ಇಂದಿಗೂ
ಸಂದುಹೋಗುತ್ತಿರುವ ಕಾಲಕಾಲದಲ್ಲಿ
ನೆನಪಿಗೆಳಕೊಳ್ಳುತ್ತೇನೆ ಅದನ್ನು ನಾನು
ನಿಜದ ನಿಜವಾಗಿಯೂ ಆ ದಿನ ಮಾತ್ರವೇ
ನನ್ನದೆಂದು ಉಳಿದ ಒಂದು ದಿನವಾಗಿ
ಕಳೆಯಲಿರುವಂತಿರುವ ಕಾಲ ಕಳೆದು
ಎಷ್ಟೋ ಕಾಲದ ಬಳಿಕವೂ
ಇದೇ ಮಾದಕವಾದರೂ

ಸುಂದರವಾದ, ನಿರ್ದಯವಾದ
ನನ್ನ ಮತ್ತು ನಿನ್ನದೂ ಆದ
ಮತ್ತು ಹಾಗೆ ಉಳಿಯದೇ ಹೋದ

ಈ ಹಸಿರು ನೆಲದ ಮೇಲೆ
ಈ ಹಚ್ಚ ಹಸಿರು ನೆಲದ ಮೇಲೆ


-ವಿಜಯರಾಘವನ್ ರಾಮಕುಮಾರ್