ಅನುದಿನ ಕವನ-೧೨೩೭, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್, ಚಿತ್ರ ಕೃಪೆ: ಶಿವಶಂಕರ‌ ಬಣಗಾರ, ಹೊಸಪೇಟೆ

ಗಜಲ್

ಎದೆಯೊಳಗೆ ವಿರಹದ ಸಾವಿರ ರೆಕ್ಕೆಗಳು ಫಡಫಡಿಸುತಿವೆ ಏನು ಹೇಳಲಿ
ಕಂಗಳೊಳಗೆ ಅಗಲಿಕೆಯ ಅಲೆಗಳು ಭೋರ್ಗರೆಯುತಿವೆ ಏನು ಹೇಳಲಿ

ನಮ್ಮಿಬ್ಬರ ನಡುವೆ ದೂರವೆಂಬುದೂ ಎಷ್ಟೊಂದು ಯಾತನೆಯ ಇರಿತ
ಬುವಿ ತಾಕದ ನೋವಿನಲಿ ಮೋಡಗಳು ಅಂಡಲೆಯುತಿವೆ ಏನು ಹೇಳಲಿ

ಅಡಿಗಡಿಗೆ ಕಡಲ ಅಲೆಗಳು ಬೇಸರದ ಒಡಲ ಹೊತ್ತು ನಿಡುಸುಯ್ಯುತಿವೆ
ಜೊತೆಯಿರದೆ ಬದುಕಿನ ಹೆಜ್ಜೆಗಳು ದಿಕ್ಕು ತಪ್ಪಿದಂತಾಗಿವೆ ಏನು ಹೇಳಲಿ

ನೀನಿರದೆ ಸಂಜೆಗೆಂಪ ಹೂ ಬಾಡಿ ಒಂಟಿ ಇರುಳು ಕಂಬನಿ ಮಿಡಿದಿಹುದು
ಎದೆಯ ಭಾವನೆಗಳೆಲ್ಲ ಸ್ವರವೇ ಇರದ ರಾಗದಂತಾಗಿವೆ ಏನು ಹೇಳಲಿ

ಒಲವಿನ ಪಯಣದಿ ನಾನು ನೀನೆಂಬ ಭೇದವನಳಿದೇ ಬದುಕುತಿಹನು ಸಿದ್ಧ
ಬದುಕಿನ ಹೆಜ್ಜೆಗಳು ಜೊತೆಯಾಗದ ಹಾಸುಗಂಬಿಗಳಂತಾಗಿವೆ ಏನು ಹೇಳಲಿ


-ಸಿದ್ಧರಾಮ ಕೂಡ್ಲಿಗಿ
—–