ಬಳ್ಳಾರಿ, ಮೇ 23: ಸಮೀಪದ ಸಂಗನಕಲ್ಲು ಬಳಿ ಪ್ರತಿಷ್ಠಾಪಿಸಿರುವ ಬುದ್ಧನ ಪ್ರತಿಮೆ ಬಳಿ ಗುರುವಾರ ಬುದ್ಧ ಪೂರ್ಣಿಮೆಯನ್ನು ಸಂಭ್ರಮ ಸಡಗರ, ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ, ಯುವಜನ ಸೇವಾ ಕ್ರೀಡಾ ಇಲಾಖೆಯ ಸಚಿವರ ವಿಶೇಷ ಕರ್ತವ್ಯಧಿಕಾರಿ ಡಾ. ವೆಂಕಟಗಿರಿ ದಳವಾಯಿ ಅವರು ಮಾತನಾಡಿ,
ಗೌತಮ ಬುದ್ಧರು ದೇವರು, ಸ್ವರ್ಗ, ನರಕ, ಕರ್ಮದ ವಿಚಾರ ಧಾರೆಗಳನ್ನು ಭೋಧಿಸದೆ, ವೈಚಾರಿಕತೆಯನ್ನು ಜನರಲ್ಲಿ ತುಂಬಿದರು ಎಂದರು.
ನನನ್ನೂ ಮತ್ತು ನನ್ನ ವಿಚಾರಗಳನ್ನು ಶೋಧಿಸಿ ಸತ್ಯ ಎನಿಸಿದರೆ ಮಾತ್ರ ಸ್ವೀಕರಿಸಿ ಎಂದ ಬುದ್ಧರು. ನಾನು ಯಾವುದೇ ಪ್ರವಾದಿ,ಸಂತನಲ್ಲ, ನಾನು ಮನುಷ್ಯ ಮಾತ್ರ ಎಂದು ಗೌತಮ ಬುದ್ಧರು ಹೇಳಿದರು. ನಾನು ವಿಶೇಷ ವಿಚಾರಗಳನ್ನು ಹೇಳಲು ಬಂದಿರುವ ಒಬ್ಬ ಸಾಮಾನ್ಯ ಮನುಷ್ಯ ಎಂದು ಗೌತಮ ಬುದ್ಧರು ಹೇಳಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪೆಗೆರೆ ಅವರು ಮಾತನಾಡಿ ಡಿ.6 ರಂದು ಸಂಗನಕಲ್ಲು ಗ್ರಾಮದ ಬಳಿ ಶಾಂತಿದೂತ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಿ, ಬೌದ್ಧ ವಿಚಾರ ಹಾಗೂ ತತ್ವಗಳನ್ನು ಈ ಭಾಗದಲ್ಲಿ ಪ್ರಚಾರ ಪಡಿಸಲು ಇಂತಹ ಧಮ್ಮ ಕಾರ್ಯಗಳು ಹೆಚ್ಚೆಚ್ಚು ನಡೆಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಅಂಚೆ ಇಲಾಖೆಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಅಧೀಕ್ಷಕ ಚತಸ್ಕೋಟಿ ಅವರು ಮಾತನಾಡಿ” ಪ್ರಾಗ್ರೈತಿಹಾಸಿಕ ನೆಲೆಗಳು ಇರುವ ಪ್ರಸಿದ್ಧ ಸಂಗನಕಲ್ಲು ಬಳಿ ಬುದ್ಧ ಪೂರ್ಣಿಮೆಯನ್ನು ಸಮಾನ ಮನಸ್ಕ ಯುವಕರು ಸಂಭ್ರಮದಿಂದ ಆಚರಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.
ಬುದ್ಧರ ವಿಚಾರಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಸಮಾಜವನ್ನು ಮೌಡ್ಯ ಕಂದಾಚಾರದಿಂದ ಹೊರತರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಗೌತಮ ಬುದ್ಧರ ಮಾರ್ಗದಲ್ಲಿ ಪ್ರತಿಯೊಬ್ಬರೂ ವಿಶೇಷವಾಗಿ ಯುವ ಸಮೂಹ ಸಾಗುವ ಅಗತ್ಯವಿದೆ ಎಂದರು.
ಕರ್ನಾಟಕ ಬೌದ್ಧ ಸಮಾಜದ ಜಿಲ್ಲಾ ಮುಖಂಡ ರಮೇಶ್ ಸುಗ್ನಳ್ಳಿ ಅವರು ಮಾತನಾಡಿ, ಬುದ್ಧನೆಂದರೆ ಶಾಂತಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಇಂತಹ ಮಾದರಿ ಧಮ್ಮದ ಕಾರ್ಯಗಳು ಹೆಚ್ಚೆಚ್ಚು ನಡೆಯಬೇಕಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.
ಸನ್ಮಾನ: ಇದೇ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಸಂಗನಕಲ್ ವಿಜಯಕುಮಾರ್ ಮತ್ತು ಯುವ ಮುಖಂಡ ಕಪ್ಪಗಲ್ ಓಂಕಾರಪ್ಪ ಅವರನ್ನು ಕಂಪ್ಲಿಯ ಕರ್ನಾಟಕ ಬೌದ್ಧ ಸಮಾಜದ ಜಿಲ್ಲಾ ಘಟಕದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಬೌದ್ಧ ಸಮಾಜದ ಮುಖಂಡರಾದ ಯರ್ರೆಣ್ಣ, ಸಾಹಿತಿ ಎನ್.ಡಿ.ವೆಂಕಮ್ಮ, ಯುವ ಮುಖಂಡ ಪಿ ಜಗನ್ನಾಥ್, ನಿವೃತ್ತ ಪ್ರಾಧ್ಯಾಪಕ ಡಾ. ಬಿ. ಶ್ರೀನಿವಾಸ ಮೂರ್ತಿ, ಗಂಗಾಧರ, ಸಿರವಾರ ಮಾಜಿ ಅಧ್ಯಕ್ಷ ಶೇಖ, ಸಂಗನಕಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷರೆ ಶ್ರೀಮತಿ ಪ್ರಮೀಳಾ ವೀರೇಶ್, ಪಿ.ರಂಜಾನ್ ಬಾಷಾ ಗ್ರಾಮ ಪಂಚಾಯತಿ ಸದಸ್ಯರು ಸಂಗನಕಲ್, ಜೋಗಿನಾ ವಿಜಯಕುಮಾರ್, ಶ್ರೀಮತಿ ಪುಷ್ಪ ಚಂದ್ರಶೇಖರ್, ಬೈಲೂರು ಲಿಂಗಪ್ಪ,ಸಿ. ಶಂಕರ್, ಕಂಪ್ಲಿಯ ಬೌದ್ಧ ಸಮಾಜದ ಮುಖಂಡರಾದ ಹುಸೇನಪ್ಪ, ಶ್ರೀಧರ್, ಮಲೆಯಪ್ಪ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಲಕ್ಷ್ಮಣ ಭಂಡಾರಿ, ಭೀಮ್ ಆರ್ಮಿ ಸಂಘಟನೆ ಮುಖ್ಯಸ್ಥ ರಘು, ಕೆಎಂಎಫ್ ನಿರ್ದೇಶಕರಾದ ಧನಂಜಯ ಹಮಾಲ್, ಸಂಗನಕಲ್ಲು ತಿಪ್ಪೇಸ್ವಾಮಿ, ಲಿಂಗದೇವನಹಳ್ಳಿ ಪಾಂಡುರಂಗ, ನೂರಕ್ಕೂ ಹೆಚ್ಚು ಬುದ್ಧರ ಅನುಯಾಯಿಗಳು, ಸಂಗನಕಲ್ ಸಿರಿವಾರ್ ಕಪ್ಪಗಲ್ಲು ಗ್ರಾಮದ ಸುತ್ತಮುತ್ತಲಿನ ಮಹಿಳೆಯರು, ರೈತ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
*****