ಗೆಳತಿಯರೆ,
ಒಳಗೊಂದು ಹಾಡಿದ್ದು ಮುಚ್ಚಿಡಬಾರದು
ಹಾಡಿಬಿಡಿ, ಆಕಾಶದವಕಾಶದಲಿ ತೂರಿಬಿಡಿ
ಕೇಳುವವರಿಗಾಗಿ ತಲೆಕೆಡಿಸಿಕೊಳ್ಳಬೇಡಿ
ಒಳಗೊಂದು ಬಣ್ಣವಿದ್ದು ಅಳಿಸಬಾರದು
ಜಗತ್ತಿನ ಕ್ಯಾನ್ ವಾಸಿನಲ್ಲಿ ಚಿತ್ರಿಸಿಬಿಡಿ
ಮೆಚ್ಚುವವರಿಗೆಂದೂ ತಲೆಕೆಡಿಸಿಕೊಳ್ಳಬೇಡಿ
ಒಳಗೊಂದು ಹೂಗನಸಿದ್ದು ಬಾಡಿಸಬಾರದು
ನೆಲ ಕಂಡ ಕಡೆಯೆಲ್ಲ ಬಿತ್ತಿ, ಬೆಳೆಸಿ, ಅರಳಿಸಿ
ನೋಡುಗರಿಗಾಗಿ ತಲೆಕೆಡಿಸಿಕೊಳ್ಳಬೇಡಿ
ಒಳಗೊಂದು ಘಮವಿದ್ದು ರುಚಿಗೆಡಬಾರದು
ಅಡುಗೆ ಮನೆಯಿಂದಾಚೆಗೂ ಹರಡಿಬಿಡಿ
ಅರುಚಿಗಳಿಗೆಂದೂ ತಲೆಕೆಡಿಸಿಕೊಳ್ಳಬೇಡಿ
ಒಳಗಿರುವುದೆಲ್ಲ ಹೊರ ಹೊಮ್ಮಿದಾಗಲೇ
ಹಗುರಾಗುವುದು, ಗಾಳಿಯಲಿ ತೇಲುವುದು
ನಾವು ನಾವೇ ಆಗಿ ಹಮ್ಮಿಲ್ಲದೆ ಚಿಮ್ಮುವುದು
ಗೆಳತಿಯರೆ,
ತೆರಳುವ ಮುನ್ನ ನಿಮ್ಮ ಹಾಡನ್ನು ಹಾಡಿಬಿಡಿ
-ಎಂ. ಆರ್. ಕಮಲ, ಬೆಂಗಳೂರು
—–