ಅನುದಿನ ಕವನ-೧೨೪೬, ಕವಯಿತ್ರಿ: ಶ್ರೀದೇವಿ ಕೆರೆಮನೆ, ಅಂಕೋಲ, ಉತ್ತರ ಕನ್ನಡ ಜಿ

ಒಲೆಯ ಮೇಲಿಟ್ಟ ಹಾಲು
ಕಣ್ಣು ಮುಚ್ಚಿ ಒಡೆಯುವಷ್ಟರಲ್ಲಿ
ಉಕ್ಕಿ  ನೆಲ ಸೇರಿದೆ
ಬೆಂಕಿಯ ಝಳಕ್ಕೆ ಕೆನೆ
ಸೀದು ಕರಕಲಾಗಿದೆ….

ಪಾತ್ರೆ ಎತ್ತಿಟ್ಟು
ಒಲೆಯ ಕಟ್ಟೆಯನ್ನು
ಶುಚಿಗೊಳಿಸುವಾಗ
ಎಂದೂ ಕಾಣದ ಅಸಹನೆ

ನಾನೆ ಎಲ್ಲಾ ಕಡೆ
ಓಡಾಡಿ  ಬಡಿದಾಡಬೇಕೆ?
ಅಡುಗೆ, ಮನೆಗೆಲಸ ಜೊತೆಗೆ
ಮಕ್ಕಳ ಹೋಂವರ್ಕ್, ಪರೀಕ್ಷೆ ….
ಗೊಣಗಾಟ ಯಾರ ಕಿವಿಗೂ
ತಲುಪುವುದೇ ಇಲ್ಲ

ಉಕ್ಕಿದ ಹಾಲು ನೋಡುತ್ತಲೇ
ಅತ ತಟ್ಟನೆ ನೆನಪಾದ
“ಹಾಲು ಉಕ್ಕುವುದು ಸಮೃದ್ಧಿಯ
ಸಂಕೇತವಂತೆ” ಎನ್ನುತ್ತ
ಹರಿದು ತಿನ್ನುವಂತೆ
ತುಟಿಯನ್ನೇ ನೋಡುತ್ತ
ಕಣ್ಣು ಮಿಟುಕಿಸಿ
ಸೊಂಟಕ್ಕೆ ಕೈಚಾಚುವಾತ

ಮತ್ತೆ ನೆನಪಾಯ್ತು
ಇತ್ತೀಚೆಗೆ ಹಾಲು ಉಕ್ಕುತ್ತಲೇ ಇಲ್ಲ
ಕರಾರುವಕ್ಕಾದ ಜೀವನದಲ್ಲಿ
ಗೆರೆಕೊರೆದಂತೆ ಮಾಡುವ
ಕೆಲಸದಲ್ಲಿ ಶಿಸ್ತು, ಸಂಯಮ
ಯಾವುದೂ ಆಚೀಚೆ ಅಗುವಂತಿಲ್ಲ

ಸಿಡಿಮಿಡಿಗುಟ್ಟುತ್ತಿದ್ದ ಮನಸ್ಸು
ಒಮ್ಮೆಲೆ ತಿಳಿಯಾಯಿತು
ಹಾಲು ಉಕ್ಕುತ್ತಲೇ ಇರಲಿ
ಪ್ರತೀ ದಿನವೂ….


-ಶ್ರೀದೇವಿ ಕೆರೆಮನೆ, ಅಂಕೋಲ, ಉತ್ತರ ಕನ್ನಡ ಜಿ.
—–