ಅನುದಿನ ಕವನ-೧೨೪೭, ಕವಿ: ಡಾ. ಗೋವಿಂದರಾಜ ಆಲ್ದಾಳ

ಮನದ ಮಲ್ಲಿಗೆ

ಸಂಪಿಗೆ ಮೊಗದಲ್ಲಿ ಮಿಂಚಿನ ಮುಗುಳ್ನಗೆ
ಭಾವದ ಬೆನ್ನೇರಿ ಕಾಡುತ್ತಿತ್ತು !
ಮುಂಗುರುಳ ಮೈಮಾಟ ನತ್ತಿನ ಕಣ್ಸನ್ನೆ
ಮತ್ತೇರಿದ ಮನ ಕುಣಿಯುತ್ತಿತ್ತು ! – ೧ –

ಬಳಕುವ ನಡದಲ್ಲಿ ತುಂಬಿದ ಯೌವನ
ವಸಂತನ ಆಗಮನಕ ಕಾಯುತ್ತಿತ್ತು !
ಮೇದಿನಿ ಮಡಿಲಾಗ ಕಾಲ್ಗೆಜ್ಜೆ ನುಡಿದಾಂಗ
ಕೋಕಿಲ ಸ್ವರ ಗಾನ ಚಿಮ್ಮುತ್ತಿತ್ತು ! -೨ –

ನಸುಕಿನ ನಸುಗಂಪು ನಾಚಿ ನೀರಾಗಿ
ಇಬ್ಬನಿಯ ಮೋಹ ತುಳುಕುತ್ತಿತ್ತು !
ಕೆನ್ನೆಯ ಗುಲ್ಮೊಹರ ರಂಗು ಚಿಮ್ಮಿದಾಗ
ಕನಸಿಗೆ ಕೋಡು ಮೂಡುತ್ತಿತ್ತು ! – ೩ –

ಮೊಗ್ಗಿನ ಮೊನಚಲ್ಲಿ ಮಧುವಿನ ನಾಚುಳ್ಳಿ
ದುಂಬಿಯ ಗಾನಸುಧೆ ತೇಲುತ್ತಿತ್ತು !
ಪಡುವಣ ಮೊಗದಾಗ ತಂಗಾಳಿ ಬೀಸಿದರ
ಅಂಗಳದಿ ನವಿಲು ಕುಣಿಯುತ್ತಿತ್ತು ! -೪ –

ಕೊಳ್ಳದ ನೀರೊಳಗ ಚೆಲುವಿನ ಚಿತ್ತಾರ
ಬಿಂದಿಗೆಯ ನಾದ ಮೊಳಗುತ್ತಿತ್ತು !
ಮೆಹಂದಿಯ ಕಿರುನಗೆ ಭಾವ ತುಳಿಕಿದಾಗ
ಕಾವ್ಯದ ಸಾಲು ಮೂಡುತ್ತಿತ್ತು ! – ೫ –

 

-ಡಾ. ಗೋವಿಂದರಾಜ ಆಲ್ದಾಳ
—–