ಅನುದಿನ ಕವನ-೧೨೪೯, ಕವಯಿತ್ರಿ: ಲಾವಣ್ಯ ಪ್ರಭ, ಮೈಸೂರು

ಇಳಿದು ಬಾ ಗೆಳೆಯಾ ಇಳಿದು ಬಾ
ಬಾ ಮಳೆಯೇ ಬಾ
ಕರುಣೆಯಿರಲಿ ನಿನ್ನವರಲ್ಲಿ

ಮಣ್ಣಮಕ್ಕಳ ಸೊಲ್ಲಡಗಿ ಹೋಗಿದೆ ಇಲ್ಲಿ
ಬತ್ತುತ್ತಿರುವ ನದಿಗಂತೂ
ನಿತ್ಯ ನಿನ್ನದೇ ಧ್ಯಾನ
ನೀರಿಲ್ಲದೆ ನೀನಿಲ್ಲದೇ ಏನುಂಟು
ಜೀವ ಪ್ರಪಂಚದೊಡಲಲ್ಲಿ ?

ಯಾಕಾಗಿ ಈ ಕಣ್ಣಾಮುಚ್ಚಾಲೆಯಾಟ?
ಯಾರಿಗಿದೆ ಸಂತಸ?
ಗಿಡಗಂಟಿ ಪ್ರಾಣಸಂಕುಲ….
ಮತ್ತೆ …ನಾನು…
ನೋಡಬಹುದೇ ಆ ಸಂಕಟ?

ಸಾಕು ಸಾಕಿನ್ನು ಧೂರ್ತ ಹಠ
ನಿನಗಾದರೂ ನೆಮ್ಮದಿಯೇ?
ಇಳಿದು ಬಾ ಗೆಳೆಯಾ ಇಳಿದು ಬಾ
ಬಾ ಮಳೆಯೇ ಬಾ
ಕರುಣೆಯಿರಲಿ ನಿನ್ನವರಲ್ಲಿ.

-ಲಾವಣ್ಯ ಪ್ರಭ, ಮೈಸೂರು
—–