ಅನುದಿನ ಕವನ-೧೨೫೦, ಕವಯಿತ್ರಿ: ಎಚ್.ಎಸ್.ಮುಕ್ತಾಯಕ್ಕ, ರಾಯಚೂರು, ಕವನದ ಶೀರ್ಷಿಕೆ: ಎರಡು ಕವಿತೆಗಳು…..

ಎಚ್. ಎಸ್.ಮುಕ್ತಾಯಕ್ಕ ಅವರ
ಎರಡು ಕವಿತೆಗಳು

1.

ನನ್ನೊಲವೆ,ಎಲ್ಲಿಯಾದರೂ
ನಾವಿಬ್ಬರೇ ಹಾಡುವಂಥ
ಹಾಡುಗಳಿರಬೇಕಲ್ಲವೇ?
ಕನಸುಗಳನ್ನಾರಿಸುವ
ಶರಧಿಯ
ದಂಡೆಯಿರಬೇಕಲ್ಲವೇ?
ಮತ್ತೆ,
ನಾವು ಎಂದಿಗೂ
ಅಗಲದಂಥ ಮಾಂತ್ರಿಕ
ಕ್ಷಣಗಳಿರಬೇಕಲ್ಲವೆ?
ಚಂದ್ರ ರಾತ್ರಿಯನು
ಮೋಹಿಸುವಾಗ,
ನಾವಿಬ್ಬರೇ ಅಲೆಯುವಂಥ
ಇರುಳುಗಳಿರಬೇಕಲ್ಲವೇ
ಎಲ್ಲಿಯಾದರೂ?
ಯಾವ ಸರಿ ತಪ್ಪುಗಳಿರದ,
ಅಗಣಿತ, ದಾಟಲಾಗದಂಥ
ಗೆರೆಗಳಿರದ ಲೋಕವೊಂದು
ಇರಬೇಕಲ್ಲವೇ
ಎಲ್ಲಿಯಾದರೂ?
ನಾನಲ್ಲಿಗೆ ಹೋಗಬಯಸುವೆ.
ನಿನ್ನ ಕೈ ಹಿಡಿದು ನಗುನಗುತಾ.
ಎಂದಿಗೂ ತಿರುಗಿ ಬರದಂತೆ,
ಎಂದಿಗೂ…

2.

ಎಂದೂ ಎಲ್ಲಿಯೂ ಇರದೆ
ಇದ್ದ, ಆ ಮನೆಯ ನೆನಪು
ನನಗೆ ಯಾವಾಗಲೂ
ಆಗುತ್ತದೆ.
ಮಾತು, ನಗೆ, ನೋಟ, ಪ್ರೀತಿ
ಹೆಪ್ಪುಗಟ್ಟಿರದ,
ಏಕಾಂತದ ಕಾವಲಿರದ,
ರಾತ್ರಿಯಿಡೀ ಕಣ್ಣದೀಪ
ಉರಿಯದ, ಇರುಳ
ತಂಪಿನಲಿ ಸಾವಿನೊಡನೆ
ಅಲೆಯುತ್ತ ಹೋಗದ,
ಹೂಗಳ
ಬಣ್ಣ, ಪರಿಮಳದಿಂದ
ಶೃಂಗಾರಗೊಂಡ
ಆ ಮನೆಯು ಸದಾ
ನೆನಪಾಗುವುದು.
ಅದು ಎಲ್ಲಿಯೂ ಎಂದೂ
ಇರಲೇ ಇಲ್ಲ!
ಅಲ್ಲಿ ಯಾರೋ ಕಂಬನಿ
ಒರೆಸಿದ್ದು, ಗಲ್ಲ ತಟ್ಟಿದ್ದು,
ಅವನ ತೋಳ ಮೇಲೆ
ತಲೆಯಿಟ್ಟು ನಿದ್ರಿಸಿದ್ದು,
ಆ ಕಣ್ ರೆಪ್ಪೆಯ
ನೆರಳಿನಲಿ ಎಲ್ಲ ಮರೆತದ್ದು,
ನೆನಪಾಗುವುದು.
ಇವು ಯಾವವೂ ಎಂದೂ
ಎಲ್ಲಿಯೂ ಇರಲೇ ಇಲ್ಲ!
ಆದರೂ ನೆನಪಾಗುತ್ತವೆ!
ಆದರೂ——–!

-ಎಚ್.ಎಸ್.ಮುಕ್ತಾಯಕ್ಕ, ರಾಯಚೂರು
—–