ತರಹೀ ಗಜಲ್
ಮಿಸ್ರಾ : ಮಹಾಂತೇಶ ನವಲಕಲ್
( ಸತ್ತ ಪಾರಿವಾಳ ಹಿಡಿದು )
ಸತ್ತ ಪಾರಿವಾಳ ಹಿಡಿದು ಬಂದಿದ್ದಾಳೆ ಅವಳು
ಮುಳ್ಳು ಮಾತುಗಳನು ಹೊತ್ತು ತಂದಿದ್ದಾಳೆ ಅವಳು.
ತಣ್ಣನೆಯ ಹೂ ಮುತ್ತನಿಟ್ಟು ನಿಂತಿದ್ದಾಳೆ ಅವಳು
ಹರಿವ ಯಮುನೆಯ ನೋಡುತ ಕುಂತಿದ್ದಾಳೆ ಅವಳು .
ಬೆಳ್ಳಿ ಗೆಜ್ಜೆಯ ಸಂಭ್ರಮದಿ ನಗುತಿದ್ದಾಳೆ ಅವಳು
ಮಲ್ಲಿಗೆಯ ಮೊಗ್ಗಿಗೆ ಕಣ್ಣು ನೆಟ್ಟಿದ್ದಾಳೆ ಅವಳು .
ನಾಚುತ ಇರುಳಿಗೆ ಬೆಳಕು ಉಣಿಸುತ್ತಿದ್ದಾಳೆ ಅವಳು
ಉಪ್ಪು ಕಡಲಿನ ಹಾದಿಯಲಿ ನಲಿಯುತ್ತಿದ್ದಾಳೆ ಅವಳು .
ತಡರಾತ್ರಿಯಲಿ ಬರುವ ಸಂದೇಶಕೆ ಕಾಯುತ್ತಿದ್ದಾಳೆ ಅವಳು
ಒಲುಮೆಯ ಘಮಲಿನ ಮೊಲ್ಲೆಗೆ ತಪಿಸುತ್ತಿದ್ದಾಳೆ ಅವಳು .
ಕೋಮಲ ಕವಿತೆಯ ತಲೆ ನೇವರಿಸುತ್ತಿದ್ದಾಳೆ ಅವಳು
ಗುನುಗುವ ಬೆಳಗನು ತಬ್ಬಿ ದನಿಯಾಗುತ್ತಿದ್ದಾಳೆ ಅವಳು .
-ಡಾ. ದಸ್ತಗೀರಸಾಬ್ ದಿನ್ನಿ, ಬಳ್ಳಾರಿ
—–