ವಿಶ್ವ ಪರಿಸರ ದಿನದ ಶುಭಾಶಯಗಳೊಂದಿಗೆ,
ಮರವೊಂದು ಕವಿತೆ
ಒಳಗಿನ ಸಂಭ್ರಮವ ಚಿಗುರಿ
ಹೊರಚೆಲ್ಲುತ್ತದೆ
ನೊಂದಾಗ ಎಲೆ ಕಳಚಿಕೊಂಡು
ಬೋಳಾಗಿ ನಿಲ್ಲುತ್ತದೆ
ಮರವೊಂದು ಹಾಡು
ಕೊಂಬೆ ಮೇಲೆ ಹಕ್ಕಿಗಳ ಸಾಲಾಗಿರಿಸಿ
ತಾನೂ ಹಾಡುತ್ತದೆ
ಇಲ್ಲವೇ ಗೂಡಿನಲ್ಲಿನ ಲಾಲಿ ಗೀತೆಗಳ
ಬೆರಗಿನಲ್ಲಿ ಕೇಳುತ್ತದೆ
ಮರವೊಂದು ಮಮತೆ
ಉರಿಮಾರಿಗಳ ತಣ್ಣಗಿರಿಸಿ
ರೆಂಬೆ ಕೊಂಬೆಯ ಚಾಮರ ಬೀಸುತ್ತದೆ
ಹಸಿದವರಿಗೆ ಹಣ್ಣುದುರಿಸಿ
ಸಾರ್ಥಕತೆಯಲ್ಲಿ ಬೀಗುತ್ತದೆ
ಮರವೊಂದು ಜ್ಞಾನಿ
ಬಿರುಗಾಳಿ ಬೀಸಿದ ಮೇಲೆ
ಉಳಿದಿದ್ದು ಹೇಗೆಂದು ಚಿಂತಿಸುತ್ತದೆ
ಅಲುಗಾಡಿದ್ದು ಕೊಂಬೆಯಾದರೂ
ಬುಡದ ಗೆದ್ದಲ ಅರಿವು ಮೂಡಿಸಿಕೊಳ್ಳುತ್ತದೆ!
– ಎಂ ಆರ್ ಕಮಲ, ಬೆಂಗಳೂರು