ಅನುದಿನ ಕವನ-೧೨೫೪, ಕವಿ: ಡಾ. ಗೋವಿಂದರಾಜ ಆಲ್ದಾಳ, ಕವನದ ಶೀರ್ಷಿಕೆ: ನೇಗಿಲ‌ ಯೋಗಿ

ನೇಗಿಲ ಯೋಗಿ
ತಾಸ್ಹೊತ್ತು ಏರಿದರೆ ಕರುಳಿನ ಚೀರಾಟ
ಹಸಿವಿನ ಮದ್ದಲೆ ನುಡಿದಾಂಗ  / ದ್ಯಾವರೆ
ವಾಡ್ಯಾದ ನೆರಳು ನಗೆಯಾಡಿ ! – ೧ –

ಕಾಲಿಗೆ ಕಸುವಿಲ್ಲ ತೋಳಿಗೆ ಬಲುವಿಲ್ಲ
ಮಾಗಿದ ಮಣ್ಣಿಗೆ ಋಣವಿಲ್ಲ / ದ್ಯಾವರೆ
ಫಲವಿಲ್ಲದ ಮೋಡ ಮರಗ್ಯಾವ ! – ೨ –

ಬತ್ತಿದ ಹೊಳೆ ಸಾಲು ಎಲುಬಿನ ರಾಶಿಗಳು
ನೇಗಿಲ ಕರುಳು ನೊಂದಾವ / ದ್ಯಾವರೆ
ನೆಲ ಮೂಲ ನಂಬಿಕೆ ದಣಿದಾವ ! -೩ –

ರೈತನ ಬೆವರಿಗೆ ರಣಹದ್ದು ಮುತ್ಯಾವ
ಹಸಿರಿನ ಉಸಿರಿಗೆ ಕಸು ನೀಡು / ದ್ಯಾವರೆ
ಬರಿದಾದ ಹಳ್ಳಕ್ಕೆ ಬಾಗಿನ ! -೪ –

ಊರ ದ್ಯಾವರಿಗೆ ಕೈ ಮುಗಿದು ಬೇಡಿದರ
ಕಟ್ಟಿದ ಕಾಳು ಕಮರ್ಯಾವ / ದ್ಯಾವರೆ
ಸುಗ್ಗಿಯ ಹಿಗ್ಗಿಗೆ ಸೊಬಗಿಲ್ಲ ! – ೫ –

-ಡಾ. ಗೋವಿಂದರಾಜ ಆಲ್ದಾಳ
—–