ಒಂದು ಕನ್ನಡಕ
ಈಗಷ್ಟೇ ಲಾಠಿ ಚಾರ್ಜು
ಮುಗಿದ ಬಯಲಿನಲ್ಲೊಂದು ಮುರಿದ
ಕನ್ನಡಕ;
ಯಾರ ಕಣ್ಣಿನಿಂದ ಜಾರಿ ಬಿದ್ದುದೋ ?
ಕಾಯುತ್ತಿರಬಹುದು ಕನ್ನಡಕ ಕೂಡ
ಕಳೆದು ಹೋದ ತನ್ನ ಕಣ್ಣುಗಳಿಗಾಗಿ.
ಸುರಿದ ಕಣ್ಣೀರು ಜಗದ ಮರೆ ಮಾಡಿ ನಕ್ಕ ಜೀವ ಈಗ
ಅಳು ನುಂಗಿ ನಗಬೇಕು
ನಗುವ ಜಗದ ಮುಂದೆ
ಹಳೆಯ ಕನ್ನಡಕ ಸಿಗುವ ತನಕ
ಅಥವ ಹೊಸ ಕನ್ನಡಕ ತರುವ ತನಕ.
ಎತ್ತಿ ಕೈಯೊಳಗೆ ಹಿಡಿದೊಡೆ
ಕಂಪಿಸಿದ್ದು ನಾನೋ ? ಕನ್ನಡಕವೊ ?
ಕುತೂಹಲಕೆ;
ಕಣ್ಣಿಗೇರಿಸಿದೊಡೆ,ನನ್ನ ಕಣ್ಣೆದುರೇ
ತೆರೆಯಿತೊಂದು ಮಾಯಾಲೋಕ ;
ಹಳೆಯ ಕನ್ನಡಕದೊಳಗಿಣುಕುತಿರುವ
ಕಳೆದುಕೊಂಡವನ ಹೊಸ ಕಣ್ಣು
ಅವನದೇ
ಪುಟ್ಟ ಜಗದ ಮುನ್ನುಡಿ
ಬದುಕಿನ ಪರಿವಿಡಿ.
ಬಿಜಾಪುರ ಬೆಳಗಾವಿ ರಾಯಚೂರು
ಕಂಪ್ಲಿ,ಹೊಸಪೇಟೆ ಹಾವೇರಿ ಹಾನಗಲ್ಲು
ಹಾವನೂರು ಸವಣೂರು..
ಯಾವುದೋ ಒಂದು ಊರು.
ಕಣ್ಣು ಅಗಲಿಸಿದಷ್ಟು ಹಿಗ್ಗುವ ಬಿಸಿಲು ಕುದುರೆ
ಅಲ್ಲಿ
ಬಾಯಾರಿ ನಿಂತ ನೆಲ
-ದ ಒಡಲಿನಲಿ ಬೆವರುತಿರುವ ಬಿತ್ತಿದ ಬೀಜ
ಬಟಾ ಬಯಲಿನಲ್ಲೊಂದು
ಒಂಟಿ ಗುಡಿಸಲು ಒಳಗೊಂದು ಮೂರು ಕಲ್ಲಿನೊಲೆ ಮೇಲೆ ಸೀದ ರೊಟ್ಟಿ
ಹೊರಗೆ ರೆಂಬೆ ಕೊಂಬೆಗಳ ಕೈ ಮುಗಿಲೆಡೆಗೆ
ಚಾಚಿ
ಮಳೆ ಮೋಡಗಳಿಗೆ ಅಂಗಲಾಚುತಿರುವ ಒಣ ಮರ.
ಹೀಗೆ ನೆಟ್ಟ ನೋಟವೊಂದು ಮರದ ಮೇಲೇರುತೇರುತ
ದಿಗಂತಕೆ ಹಾರಿದರೆ ತೇರು ಹಾದಿ
ಹಾದಿಯುದ್ದಕೂ ಹಸಿದ ಕಣ್ಣಿನ
ಹರಕು ಮುರಕು ಸಂತೆ ಬೀದಿ
ಊರು ಕೇರಿ ಬಯಲು ಬಾನಿಂದ
ಕೆಳಗೆ ನಿಟ್ಟಿಸಿದರೆ
ಸುರುಳಿ ಬಿಚ್ಚಿದಂತೆಲ್ಲಾ ತೆರೆದುಕೊಳ್ಳುತಿರುವ
ಮೈ ತುಂಬ ಗೆರೆ- ಗಡಿ- ಗೋಡೆ ಎಳೆದುಕೊಂಡ
ಜಗದ ನಕಾಶೆ ವಿಷ ನೀಲಿ ಬಾನು
ಬಿಕ್ಕುವ ನದಿ ಅಳುವ ಕಡಲು.
ಅಗೋ !
ಕಣ್ಣು ತೆರೆದುಕೊಂಡೆ ಉಸಿರು ತೊರೆದ
ಜೀವ ಅಲ್ಲೊಂದು;
ಮೂಗಿನ ಮೇಲೆ ಸಣ್ಣ ತಗ್ಗು
ಹಳೆಯ ಕನ್ನಡಕ ಹಾಕಿದ ಗುರುತು
ಯಾರನ್ನೋ ಕಾಯುತಿರುವ ಹಾಗಿದೆ
ತನ್ನ ಕಳೆದು ಹೋದ ಕನ್ನಡಕವ ?
ಅಥವ
ಮುನಿದು ಮನೆ ಬಿಟ್ಟು ಶಹರು ಸೇರಿದ
ಮಗನ ದಾರಿಯ ?
-ಲಕ್ಷ್ಮಣ್ ವಿ. ಎ, ಬೆಂಗಳೂರು
—–