ಅನ್ನಪೂರ್ಣೆಯಿವಳು…..
ಭೂಮಿಯೊಳು ಸತ್ವವನಿರಿಸಿ ಬೀಜದೊಳು ಜೀವವನಿರಿಸಿ
ಸುರಿವ ಹನಿಯೊಳು ತಂಪಿರಿಸಿ ಗಾಳಿಯೊಳು ಉಸಿರನಿರಿಸಿ
ಚಿಗುರೊಡೆದು ಬೆಳೆದ ಬೆಳೆ ಸ್ರವಿಸಿದ ಬೆವರಹನಿಗೆ ಮುಕ್ತಿ…
ನಳಿಸುವ ಕಾಯಿಪಲ್ಲೆ ಮುದದಿ ತರಿದು ಹಿತದಿ ಬೇಯಿಸಿ
ಉಪ್ಪು ಹುಳಿ ಖಾರಗಳ ಬೆರೆಸಿ ಮೇಲೊಂದಿಷ್ಟು ಒಗ್ಗರಣೆ
ಘಮ ಘಮಿಸುವ ಸುವಾಸನೆಗೆ ಅರಳು ಮಲ್ಲಿಗೆ ಅನ್ನದ
ಮೇಲೊಂದಿಷ್ಟು ಬಿಸಿ ತುಪ್ಪ ಹೊಟ್ಟೆ ಹಸಿವಿಗಿದೋ ಮುಕ್ತಿ…
ಅಂದದ ಮೊಗದಲಿ ಚೆಂದದ ನಗುವು ತುಟಿಯಲರಳಲು
ಬಡಿಸುವ ಕೈ ಬಳೆ ನಾದ ಗೀತೆ ತುತ್ತಿಗೆ ಜೊತೆಯಾಗಿರಲು
ಬಳಲಿದ ದೇಹಕೆ ಅರಳುವ ಮನಕೆ ಒಲವಿನ ಸಾಂತ್ವನ
ಗಂಜಿಯೋ ಅಂಬಲಿಯೋ ನಾಲಿಗೆ ರುಚಿಗೆ ಮುಕ್ತಿ…
ಹಸಿದ ಹೊತ್ತಿಗೆ ಉಣಲಿಕ್ಕಿ ಬಿಕ್ಕಲು ನೀರುಣಿಸುವಳು
ಅಕ್ಕರೆ ಬೆರೆತ ತುತ್ತು ತುತ್ತಿನಲೂ ಅಮೃತವೇ ಜಿನುಗಲು
ಬೇಕಿನ್ನೇನು ಬೇರೆ ಧ್ಯಾನ ನಿತ್ಯ ಆಹಾರೋಪಾಸನೆ ಇವಳಿಗೆ
ಸದಾ ಪೂರ್ಣೆ ಅನ್ನಪೂರ್ಣೆಯಿವಳು ಇವಳಿರುವೇ ಮುಕ್ತಿ…
-ಎಂ.ಆರ್.ಸತೀಶ್… ಕೋಲಾರ
—–