ಅನುದಿನ ಕವನ-೧೨೬೧, ಹಿರಿಯ ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ

ಅಭಿಮಾನವಿರಲಿ‌ ಮಾತೆಯಲಿ
ಪ್ರೀತಿಯಿರಲಿ ಸಂಗಾತಿಯಲಿ

ಗೌರವವಿರಲಿ ಜನ್ಮದಾತನಲಿ
ಮಮತೆಯಿರಲಿ ಜನನಿಯಲಿ

ಸ್ನೇಹದ ಅರಿವಿರಲಿ  ಪರಸ್ಪರರಲಿ
ಸಮ್ಮತಿಯಿರಲಿ ಭಿನ್ನತೆಯಲೂ

ಸಹಜವದು ಸಂಘರ್ಷ ಕ್ಷಣಿಕವಾಗಿರಲಿ
ಉಕ್ಕಿ ಹರಿಸಲಿ ಕೋಪ ಪ್ರೀತಿಯನು

ಪನ್ನೀರಾಗಲಿ ಕಣ್ಣೀರು ಅಮೃತವಾಗಲಿ
ಅರ್ಥ ಮೂಡಿ ಬರಲಿ ಜೀವನ ಪಯಣದಲಿ

ಅಮ್ಮ ಹೇಳುವಳು ‘ನಾವಿನ್ನೆಷ್ಟು ದಿನ
ನಿತ್ಯ ಇರುವೆವೆ ನಾವು ನಿಮ್ಮ ಬಳಿ’

ಅಪ್ಪ ಹೇಳುವ ‘ಮುಂದೆ ದಾರಿ‌ ನಿಮ್ಮದೆ
ಹಿಡಿಯಲಾರೆ ಕೈಯ ಶಾಶ್ವತಿಯಲಿ’

ಇರುವಳಲ್ಲವೆ ನಿನ್ನವಳೀಗ
ಇರುವನಲ್ಲವೇ ನಿನ್ನವನು

ನಿನಗೆ ದಾರಿದೀಪವಾಗಳೇ ಅವಳು
ಅವಳಿಂದೆ ನೀನು ನಿನ್ನಿಂದ ಅವಳಲ್ಲವೇ?

ಮುಂದಿದೆ ನಿಮಗೆ ದಾರಿ ದೂರ
ಕ್ರಮಿಸಿ ನೀವು ಹೃದಯಗಳ ಜೋಡಿಸಿ

ದೀಪದಿಂದದಲ್ಲವೇ ದೀಪದ ಬೆಳಕು
ಅರಿವಿನಿಂದಲ್ಲವೇ ಬಾಳಿನ ಸೊಬಗು?

_ಅರುಣ ಕುಮಾರ ಹಬ್ಬು, ಹುಬ್ಬಳ್ಳಿ
—–