ಖಡಕ್ ಪತ್ರಕರ್ತ ಮದನ ಮೋಹನ್, ನುಡಿ‌ನಮನ: ಶಿವಾಜಿನಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು

ಖಡಕ್ ಪತ್ರಕರ್ತ ಮದನ ಮೋಹನ್

ಉತ್ತರ ಕರ್ನಾಟಕದ ಖ್ಯಾತ ಮತ್ತು ಖಡಕ್ ವ್ಯಕ್ತಿತ್ವದ ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ್ ಕಳೆದ ವಾರ ವಯೋಸಹಜ ಅನಾರೋಗ್ಯದಿಂದ ನಿಧನರಾದದ್ದು ಹಳೆಯ ಸುದ್ದಿ. 1982ರಿಂದ 85ರವರೆಗೆ ನಾನು ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ವರದಿಗಾರನಾಗಿ ಕೆಲಸ ಮಾಡಿರುವೆ. ಧಾರವಾಡ ಜಿಲ್ಲೆ ಆಗ ಹದಿನೇಳು ತಾಲ್ಲೂಕುಗಳನ್ನು ಹೊಂದಿತ್ತು. ಅಂತಹ ಒಂದು ದೊಡ್ಡ ಜಿಲ್ಲೆಗೆ ಪತ್ರಿಕೆಯಲ್ಲಿ ಕೇವಲ ನಾಲ್ಕು ವರ್ಷ ಅನುಭವಹೊಂದಿದ್ದ ನನಗೆ ಕೆಲಸ ಮಾಡುವುದು ಸುಲಭವೇನಿರಲಿಲ್ಲ. ಅಲ್ಲಿನ ಹಿರಿಯರ ಸಲಹೆ ಮತ್ತು ಮಾರ್ಗದರ್ಶನದ ಅವಶ್ಯಕತೆ ಇತ್ತು.
ಆ ವೇಳೆಗಾಗಲೇ ಹುಬ್ಬಳ್ಳಿಯನ್ನು ಕೇಂದ್ರವನ್ನಾಗಿಸಿಕೊಂಡು ಸುಮಾರು ಹತ್ತದಿನೈದು ವರ್ಷ ಇಡೀ ಉತ್ತರ ಕರ್ನಾಟಕದ ಎಂಟು ಜಿಲ್ಲೆ ಗಳ ಜೊತೆಗೆ ಪಕ್ಕದ ಗೋವಾ ರಾಜ್ಯವನ್ನೂ ನೋಡಿಕೊಳ್ಳುತ್ತಿದ್ದ ಏಕೈಕ ಪತ್ರಕರ್ತ ಮದನ ಮೋಹನ್. ದ ಹಿಂದೂ ಪತ್ರಿಕೆಗೆ ಅವರು ಹಗಲಿರುಳು ಓಡಾಡಿಕೊಂಡು ಕೆಲಸ ಮಾಡುತ್ತಿದ್ದರು. ಇಂದು ಹುಬ್ಬಳ್ಳಿಯಲ್ಲಿದ್ದರೆ ನಾಳೆ ಮತ್ತೊಂದು ಜಿಲ್ಲೆ ಇನ್ನೊಂದು ದಿನ ಗೋವಾ ಹೀಗೆ ಬಿರುಗಾಳಿಯಂತೆ ಸುತ್ತುತ್ತಿದ್ದ ಬಿಡುವಿಲ್ಲದ ಪಾದರಸದಂತಹ ಪತ್ರಕರ್ತ ಅವರಾಗಿದ್ದರು.
ಹೆಗಲ ಮೇಲೊಂದು ಬಟ್ಟೆ ಬ್ಯಾಗು, ಇಲ್ಲವೇ ಸಣ್ಣದೊಂದು ಲೆದರ್ ಪಸ್ರ್À ರೀತಿಯ ಬ್ಯಾಗು ಅವರ ಕೈಯಲ್ಲಿ ಸದಾ ಇರುತ್ತಿತ್ತು. ಮದನ ಮೋಹನ್ ಎಲ್ಲ ರಾಜಕಾರಣಿಗಳ ಪತ್ರಿಕಾಗೋಷ್ಠಿಗೂ ಬರುತ್ತಿರಲಿಲ್ಲ. ಆಯ್ದ ರಾಜಕಾರಣಿ ಮತ್ತು ಮಂತ್ರಿಗಳ ಪತ್ರಿಕಾಗೋಷ್ಠಿಗಳಿಗೆ ಮಾತ್ರ ಬರುತ್ತಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ಮದನ ಮೋಹನ್ ಅವರನ್ನು ಎದುರಿಸುವುದು ರಾಜಕಾರಣಿಗಳಿಗೆ ಸುಲಭವಾಗಿರಲಿಲ್ಲ. ಹುಬ್ಬಳ್ಳಿ ರಾಜಕೀಯದಲ್ಲಿ ಸೋಮಪ್ಪ ರಾಮಪ್ಪ ಬೊಮ್ಮಾಯಿ ಅವರು ರಾಜ್ಯ ರಾಜಕಾರಣದಲ್ಲಿ ಹೆಚ್ಚಾಗಿ ಬೆಳಕಿಗೆ ಬರಲು ಮದನ ಮೋಹನ್ ಅವರ ಬರವಣಿಗೆಯ ಒತ್ತಾಸೆ ಕಾರಣ ಎಂದರೆ ತಪ್ಪಾಗದು. ಬೊಮ್ಮಾಯಿ ಅವರು ವಿರೋಧ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಆಗಿದ್ದಾಗಲೂ ಮದನ ಮೋಹನ್ ಹುಬ್ಬಳ್ಳಿಯಲ್ಲಿ ಇಲ್ಲ ಎಂದರೆ ಪತ್ರಿಕಾಗೋಷ್ಠಿಯನ್ನೇ ಮಾಡುತ್ತಿರಲಿಲ್ಲ. ಬೊಮ್ಮಾಯಿ ಅವರು ಮದನ ಮೋಹನ್ ಬರುವವರೆಗೂ ಪತ್ರಿಕಾಗೋಷ್ಠಿಗೆ ಹಾಜರಾಗುತ್ತಿರಲಿಲ್ಲ.
ಆ ದಿನಗಳಲ್ಲಿ ರಾಮಕೃಷ್ಠ ಹೆಗಡೆ ಅವರ ನೇತೃತ್ವದ ಜನತಾ ಪಕ್ಷದ ಸರ್ಕಾರವಿದ್ದಾಗ ವಿಧಾನ ಪರಿಷತ್ತಿನಲ್ಲಿ ಟಿ.ಎನ್. ನರಸಿಂಹಮೂರ್ತಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಟಿಎನ್‍ಎನ್ ಎಂದೂ ವಿಧಾನಸಭೆಗೆ ಆರಿಸಿ ಬಂದವರಲ್ಲ. ಐದಾರು ಬಾರಿ ವಿಧಾನ ಪರಿಷತ್ ಸದಸ್ಯರು, ಸಭಾಪತಿ ಮತ್ತು ವಿರೋಧಿ ನಾಯಕರಾಗಿದ್ದರು. ಹಾಗಾಗಿ ಒಬ್ಬ ಸಣ್ಣ ಹುಡುಗ ಪತ್ರಕರ್ತನೆಂದು ಬಂದರೂ ಅತ್ಯಂತ ಗೌರವ ಕೊಡುತ್ತಿದ್ದರು. ಗೊತ್ತಿರುವವರು ಮತ್ತು ಗೊತ್ತಿಲ್ಲದಿರುವವರು ಯಾರೇ ಸತ್ತರು ಅವರದೊಂದು ಸಂತಾಪ ಹೇಳಿಕೆ ಇದ್ದೇ ಇರುತ್ತಿತ್ತು.
ಅವರು ಹುಬ್ಬಳ್ಳಿಗೆ ಬಂದು ಪತ್ರಿಕಾಗೋಷ್ಠಿ ಮಾಡಿದರೆ ಅದರಲ್ಲೂ ಅಂದು ಮದನ ಮೋಹನ್ ಇದ್ದರೆ ಅವರ ಕಥೆ ಮುಗಿಯಿತು. ನರಸಿಂಹಮೂರ್ತಿ ಅವರು ಮದನ ಮೋಹನ್ ಅವರಿಗೆ ಉತ್ತರಿಸಲಾರದೆ ಗೋಳಾಡುವುದು ಸಾಮಾನ್ಯವಾಗಿರುತ್ತಿತ್ತು. ಮದನ್ ಪ್ಲೀಸ್ ಕೋ ಆಪರೇಟ್ ಮಿ ಎಂದು ಗೋಗೆರೆಯುತ್ತಿದ್ದರು. ಬೂಸಿ ಬಿಡುವವರಿಗೆ ಮದನ ಮೋಹನ್ ಸಿಂಹಸ್ವಪ್ನವಾಗಿರುತ್ತಿದ್ದರು.
ಮದನ ಮೋಹನ್ ಎಲ್ಲ ಪತ್ರಕರ್ತರಂತೆ ಅಲ್ಲ. ಅವರು 1952ರ ವಿಧಾನಸಭೆ, ಲೋಕಸಭೆ ಮತ್ತು ಗೋವಾ ರಾಜ್ಯದ ಎಲ್ಲ ಚುನಾವಣೆಗಳ ಮಾಹಿತಿಯ ಕಣಜವನ್ನು ಹೊಂದಿದ್ದರು. ಚುನಾವಣೆ ದಿನಗಳು ಬಂದರೆ ಅವರಿಂದ ನಾನು ಅನೇಕ ಬಾರಿ ಮಾಹಿತಿ ಪಡೆದು ಚರ್ಚಿಸಿದ್ದೇನೆ. ತಮಗಿಂತ ದೊಡ್ಡವರು ಮತ್ತು ಚಿಕ್ಕವರು ಎನ್ನುವ ತಾರತಮ್ಯ ಅವರಲ್ಲಿರಲಿಲ್ಲ. ಚೆನ್ನಾಗಿ ಬರೆಯುವವರಿಗೆ ಮತ್ತು ಬುದ್ಧಿವಂತರನ್ನು ಪ್ರೋತ್ಸಾಹಿಸುವ ಒಳ್ಳೆಯ ಗುಣ ಅವರಲ್ಲಿತ್ತು.
ಆದರೆ ಯಾರದಾದರೂ ಪತ್ರಿಕಾಗೋಷ್ಠಿಯಲ್ಲಿ ಪೆದ್ದು ಪೆದ್ದಾಗಿ ಹೇಳಿದರೆ ಅವರ ಕಥೆ ಮುಗಿಯಿತು. ಅಂತಹವರ ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೇ ಬಹಿಷ್ಕರಿಸಿ ಹೊರಟು ಬಿಡುತ್ತಿದ್ದರು. ತಮಗೆ ಸರಿಕಾಣದಿದ್ದರೆ ಅಂತಹವರ ಪತ್ರಿಕಾಗೋಷ್ಠಿಗಳಲ್ಲಿ ಕಾಫಿ ಟೀ ಕೂಡ ಕುಡಿಯುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಖಡಕ್ ಪತ್ರಕರ್ತ. ಮದನ್ ಮೋಹನ್ ಬೆಂಗಳೂರು ಮತ್ತು ದೆಹಲಿ ಮಟ್ಟದಲ್ಲಿ ಕೆಲಸ ಮಾಡಿದ್ದರೆ ಹೆಚ್ಚು ಜನಪ್ರಿಯ ಪತ್ರಕರ್ತರಾಗಿರುತ್ತಿದ್ದರು. ಅದರೆ ಅವರು ಹುಬ್ಬಳ್ಳಿ ಬಿಟ್ಟು ಕದಲಲೇ ಇಲ್ಲ. ಇಂತಹ ಹಿರಿಯ ಸ್ನೇಹಜೀವಿಯಾಗಿದ್ದ ಮದನ ಮೋಹನ್ ಅವರಿಗೆ ನನ್ನ ಅಂತಿಮ ನಮನಗಳು.


-ಶಿವಾಜಿ‌ ಗಣೇಶನ್, ಹಿರಿಯ ಪತ್ರಕರ್ತರು, ಬೆಂಗಳೂರು
—–