ಇತಿಹಾಸ ಪ್ರಜ್ಞೆ ಮೂಡಿಸಲು ಇಂತಹ ವಿಶೇಷ ಉಪನ್ಯಾಸಗಳ ಅಗತ್ಯವಿದೆ -ಪ್ರಾಚಾರ್ಯ ಡಾ.‌ಎಚ್.ಕೆ. ಮಂಜುನಾಥ ರೆಡ್ಡಿ

 

ಬಳ್ಳಾರಿ, ಜೂ.20: ಇತಿಹಾಸ ಪ್ರಜ್ಞೆ ಮೂಡಿಸಲು ಇಂತಹ ವಿಶೇಷ ಉಪನ್ಯಾಸಗಳ ಅಗತ್ಯವಿದೆ ಎಂದು
ಎಸ್.ಎಸ್.ಎ (ಸರಳಾದೇವಿ) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಕೆ. ಮಂಜುನಾಥ ರೆಡ್ಡಿ ಅವರು ಹೇಳಿದರು.
ನಗರದ ಪುನರುತ್ಥಾನ ಅಧ್ಯಯನ ಕೇಂದ್ರ, ಕಾಲೇಜಿನ ಇತಿಹಾಸ ವಿಭಾಗ ಮತ್ತು ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ‘ಹೆಮ್ಮೆಯ ಕೆಳದಿಯ ಅರಸರು: ಕರ್ನಾಟಕ ವಿಜಯನಗರ ಸಾಮ್ರಾಜ್ಯ’ದ ನೈಜ ವಾರಸುದಾರರು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಇತಿಹಾಸದ ಕುರಿತು ವಿದ್ಯಾರ್ಥಿ ಯುವಜನರಲ್ಲಿ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಅನಿವಾರ್ಯ ಎಂದು ಪ್ರತಿಪಾದಿಸಿದರು.
ಶಿವಮೊಗ್ಗದಲ್ಲಿರುವ ಕೆಳದಿ ಅರಸರ ಅರಮನೆ ವಿಜಯನಗರದ ವೈಭವವನ್ನು ನೆನಪಿಸುತ್ತದೆ. ವಿದ್ಯಾರ್ಥಿಗಳು ಯುವ ಜನರು ಇತಿಹಾಸವನ್ನು ಆಸಕ್ತಿಯಿಂದ ಅವಲೋಕಿಸಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸ ನೀಡಿದ ಇತಿಹಾಸ ಸಂಶೋಧಕ, ಲೇಖಕ ಶಿವಮೊಗ್ಗದ ಅಜಯಕುಮಾರ ಶರ್ಮ‌ ಅವರು, ಉಕ್ಕು, ಕಬ್ಬಿಣ ಬಳಕೆ ಮತ್ತು ತಂತ್ರಜ್ಞಾನವನ್ನು ಮೊಟ್ಟಮೊದಲು ಕಂಡು ಹಿಡಿದದ್ದು ಭಾರತೀಯರು ಎಂದು‌ ತಿಳಿಸಿದರು.
ಸಾಮ್ರಾಟ್ ಅಶೋಕ ದೇಶದಲ್ಲಿ‌‌ ಕಬ್ಬಿಣ ದೊರೆಯುವ ಸ್ಥಳಗಳನ್ನು ಮ್ಯಾಪಿಂಗ್ ಮಾಡಿದ್ದಾನೆ. ರಾಮಾಯಣ ಕಾಲದಲ್ಲೂ ಕಬ್ಬಿಣ ಬಳಕೆ ಇತ್ತು ಎಂದು ಹೇಳಿದರು.
ನಾಯಕ ಪದ ಜಾತಿ ಸೂಚಕವಲ್ಲ, ಶೌರ್ಯದ ಸೂಚಕ ಎಂದರು.


ಬ್ರಿಟೀಷರೊಂದಿಗೆ ಮಾತ್ರವಲ್ಲ ಪೋರ್ಚುಗೀಸರ ವಿರುದ್ಧ ಹೋರಾಟ ಮಾಡಿದವರು ಕೂಡಾ ಸ್ವಾತಂತ್ರ್ಯ ಹೋರಾಟಗಾರರು ಎಂದು ತಿಳಿಸಿದರು.
ಲಂಡನ್ ಮ್ಯೂಸಿಯಮ್ ನಲ್ಲಿ ಇರುವುದು ಭಾರತದ ಇತಿಹಾಸ. ಇದನ್ನು ದೋಚಿಕೊಂಡು ಹೋಗಿದ್ದನ್ನೇ ಬ್ರಿಟೀಷರು ಪ್ರದರ್ಶಿಸುತ್ತಿದ್ದಾರೆ. ಅವರದೇ ಆದ ಯಾವುದೇ ಇತಿಹಾಸವಿಲ್ಲ ಎಂದು ಕಟುಕಿದರು.
ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಿ ಎಚ್ ಸೋಮನಾಥ್ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರನ್ನು ಕೇಂದ್ರದ ಪರವಾಗಿ ಶ್ರೀನಾಥ್ ಜೋಷಿ ಸನ್ಮಾನಿಸಿ ಗೌರವಿಸಿದರು.


ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶಶಿಕಾಂತ‌ ಬಿಲ್ಲವ, ಸಹಾಯಕ ಪ್ರಾಧ್ಯಾಪಕರಾದ ಬಸಪ್ಪ, ಡಾ. ಚೂಡಾಮಣಿ,
ಉಪನ್ಯಾಸಕರಾದ ಎಂ. ರಫಿ, ಟಿ ರುದ್ರಗೌಡ, , ಶ್ಯಾಮರಾಜ ನಾಯಕ್, ಹೇಮೆಗೌಡ್, ಹರೀಶ್ ಬಿ,ಸ್ವಾರಪ್ಪ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಿ.ಮಂಜುನಾಥ್ ಮತ್ತಿತರರು ಇದ್ದರು.
ಪುನರುತ್ಥಾನ ಅಧ್ಯಯನ ಕೇಂದ್ರದ ಶ್ರೀನಾಥ ಜೋಷಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
——–