ಅನುದಿನ ಕವನ-೧೨೬೯, ಕವಯಿತ್ರಿ: ರೇಣುಕಾ ರಮಾನಂದ್,, ಅಂಕೋಲಾ, ಕವನದ ಶೀರ್ಷಿಕೆ: ಇವಳು ನನ್ನವ್ವ

ಇವಳು ನನ್ನವ್ವ

ನಿಂತು ನೋಡಬಹುದು
ನೀವೆಲ್ಲ….
ಪುಟ್ಟ ಪ್ಲಾಸ್ಟಿಕ್ ಬಳೆಗಳ ಪೋರಿ
ಮುದ್ದು ವೈಶಾಲಿ
ನನ್ನ ಮಗಳು

ಇವಳು ಹುಟ್ಟಿದ ವರುಷ
ಧೋ ಧೋ ಮಳೆ
ಬಣಿವೆ,ಕಣಜಗಳೆಲ್ಲ ತುಂಬಿ
ಗುಡ್ಡದ ಕರಿಕಾನಮ್ಮನಿಗೆ ಊರ ಗೌಡನ
ಹಿಂಗಾರಗೊನೆಯ ಪೂಜೆ

ರಣರಣ ಮಧ್ಯಾಹ್ನ
ತುಸು ಜೊಂಪು ಹತ್ತಿದರೆ
ಬೊಗಸೆ ಎಣ್ಣೆ ತಂದು
ತಟ್ಟುತ್ತಾಳೆ ತಲೆ
ಮೆಲ್ಲಗೆ ಸದ್ದಾಗದಂತೆ
ಬಾಚುತ್ತಾಳೆ ನಡುವೊಂದು ಬೈತಲೆ
ಇಬ್ಬದಿಗೆರಡು ಜುಟ್ಟು
ಆಗಾಗ ಎವೆ ಅಗಲಿಸಿ ಪರಿಶೀಲಿಸುತ್ತಾಳೆ
ಸುಳ್ಳುನಿದ್ದೆಯ ಪತ್ತೆಹಚ್ಚಿ
ಕೆನ್ನೆಗೆರಡು ತಟ್ಟುತ್ತಾಳೆ
ಇವಳು ನನ್ನವ್ವ

ಇದೀಗ ಕಲ್ಲಾಟ, ಕುಂಟಲಿಪಿಗಳೆಲ್ಲ
ಮುಗಿದು ಹೆದ್ದಾರಿಗುಂಟ ಹೊಸ ಸೈಕಲ್ಲು
ಏರಿಳಿವ ಉಮೇದು
ಅಪ್ಪ ಕೊಡಿಸಿದ್ದಲ್ಲವೆಂದು
ತುಸುವೂ ಮುನಿಸಿಲ್ಲ
ಹೇಳದಿದ್ದರೂ ಗೊತ್ತವಳಿಗೆ
ಅಪ್ಪನ ಕೈ ಗಿಡ್ಡ,
ಬೆವರು ಭರಪೂರ

ಕಲಿವ ಮಗಳಿಗಿಂತ
ಕಲಿಸುವ ಅಪ್ಪನಿಗೇ ಉಮೇದಿ
ಎಂದೇನೂ ಮುಸಿಮುಸಿ ನಗಬೇಡಿ
ಹಾಲುಗುಂಬಳದಂತಹ ಕರುಳಕುಡಿಗೆ
ಒಳಪೆಡ್ಲು ಕಲಿಸುವುದನ್ನು
ನೀವೊಮ್ಮೆ ಅನುಭವಿಸಿಯೇ ತೀರಬೇಕು
ಅದಕ್ಕೇ ಹೇಳುವುದು
ಎಲ್ಲ ಅಪ್ಪಂದಿರಿಗೆ
ಕುಡಿಬಾಳೆ ಎಲೆಯಂತಹ ಮುದ್ದಾದ ಮಗಳೊಬ್ಬಳಿರಬೇಕು…….

-ರೇಣುಕಾ ರಮಾನಂದ್,, ಅಂಕೋಲಾ
——