ನಿಮಗೆ ಮುದಿತನ ಬರುತ್ತದೆ
ನಿಮಗೆ ಮುದಿತನ ಬರುತ್ತದೆ
ಕನ್ನಡಿ ನೋಡಿ ಖುಷಿ ಪಡದಿದ್ದರೆ
ಹೊಸತನ್ನು ಕಲಿಯದೆ, ಕೇಳದಿದ್ದರೆ
ನಿಮಗೆ ಮುದಿತನ ಬರುತ್ತದೆ
ಕನಸು ಕಾಣುವುದನ್ನು ನಿಲ್ಲಿಸಿದ್ದರೆ
ಪ್ರೀತಿಸುವವರೇ ಇಲ್ಲವೆಂದುಕೊಂಡರೆ
ನಿಮಗೆ ಮುದಿತನ ಬರುತ್ತದೆ
ಗಿಡಗಳೊಂದಿಗೆ ಗಿಡವಾಗದಿದ್ದರೆ
ಹೊಸ ಬೀದಿಗಳಲ್ಲಿ ಅಲೆಯದಿದ್ದರೆ
ನಿಮಗೆ ಮುದಿತನ ಬರುತ್ತದೆ
ಹತಾಶೆ, ನಿರಾಶೆಯಲ್ಲೇ ಮುಳುಗಿದ್ದರೆ
ನಿಂದಿಸುವುದನ್ನೇ ರೂಢಿಸಿಕೊಂಡರೆ
ನಿಮಗೆ ಮುದಿತನ ಬರುತ್ತದೆ
ಕಂಡದ್ದರಲ್ಲೆಲ್ಲ ತಪ್ಪು ಹುಡುಕುತ್ತಿದ್ದರೆ
ಸಿನಿಕತನವೇ ಆದರ್ಶವಾಗಿಬಿಟ್ಟರೆ!
ನಿಮಗೆ ಮುದಿತನ ಬರುತ್ತದೆ
ಕಣ್ಣುಗಳು ತೇವಗೊಳ್ಳದಿದ್ದರೆ
ಅಂತಃಕರಣದ ಸೆಲೆ ಬತ್ತಿ ಹೋದರೆ
ನಿಮಗೆ ಮುದಿತನ ಬರುತ್ತದೆ
ನೋವು ನಲಿವಿಗೆ ಮಿಡಿಯದಿದ್ದರೆ
ಬದುಕು ನೀಡಿದ್ದಕ್ಕೆ ಧನ್ಯತೆಯಿರದಿದ್ದರೆ
ನಿಮಗೆ ಮುದಿತನ ಬರುತ್ತದೆ
-ಎಂ.ಆರ್. ಕಮಲ, ಬೆಂಗಳೂರು
—–