ಮನು ಅಳಬೇಕು….
ಪೇಟೆ ಬೀದಿಯಲ್ಲಿ
ಬಿಜಿನೆಸ್ ಕಾಂಪ್ಲೆಕ್ಸ್ ನಲ್ಲಿ
ಎಲ್ಲೊ ಒಂದು ಅಂಗಡಿ ಮಳಿಗೆ ಖಾಲಿಯಾದಾಗ
ಅಲ್ಲಿ
ನಮ್ಮವರದೊಂದು ಅಂಗಡಿ ಬರಬೇಕೆಂದು
ಆಸೆ ಪಡುತ್ತೇನೆ
ಸಂತೆಪೇಟೆಯಲ್ಲಿ
ಸುಂದರ ಮಳಿಗೆಯೊಂದರಲ್ಲಿ
ದಲಿತ ಯುವಕನೊಬ್ಬ ವ್ಯಾಪಾರ ವ್ಯವಹಾರ ಮಾಡುವುದ ಕಂಡು
ಏನೋ ಸಾಧಿಸಿದ ತೃಪ್ತಿಯಿಂದ ಖುಷಿಗೊಳ್ಳುತ್ತೇನೆ
ದಲಿತ ಉದ್ಯಮಶೀಲತೆ ಎಂಬುದು ಲಾಭವಲ್ಲ ನಷ್ಟವಲ್ಲ
ಬದುಕಿನ
ಚಿತ್ರಣದ ಬದಲಾವಣೆ
ಶೌಚಾಲಯ ಶುಚಿಗೊಳಿಸುವ ಕೈಗೆ ತೂಕದ ಬಟ್ಟು ಬಂದಾಗ
ಪೊರಕೆ ಹಿಡಿಯುವ ಕೈ
ದುಡ್ಡು ಎಣಿಸಲು ಕುಂತಾಗ
ಜೀತ ಮಾಡುವವ
ಬಿಜಿನೆಸ್ ನ
ಜ್ಯೋತಿ ಹಿಡಿದಾಗ
ದಲಿತ ಹೋರಾಟ ಎಂದೂ
ಕೊನೆಯಾಗುವುದಿಲ್ಲ ತಮ್ಮ
ಧಿಕ್ಕಾರ ಕೂಗುವ ಬಾಯಲ್ಲಿ
ಹಣ ಸಂಪಾದನೆಯ
ಮೌನದ ಸದ್ದು
ಘೋಷಣೆ ಫಲಕ ಹಿಡಿದ ಕೈಯಲ್ಲಿ ವಸ್ತುವಿನ ಮಾರಾಟದ ಮದ್ದು
ಡಿಸಿ ಆಫೀಸಿನ ಮುಂದೆ ಕುಳಿತಿದ್ದವ
ಚಿನ್ನದ ಅಂಗಡಿಯ ಒಳಗೆ
ಶೇಟ್ ಜಿ ಯ ಸ್ಥಾನ ಆಕ್ರಮಿಸಿದಾಗ
ಮನು ಅಳಬೇಕು
ತಾನು ಬರೆದ ಶ್ರೇಣಿ
ಅದಲು ಬದಲಾಗುತ್ತಿದೆ ಎಂದು
ವರ್ಣಾಶ್ರಮದ ಗುಡಿಸಲು ಸುಟ್ಟು
ಸಮಾನತೆಯ ಬಿಲ್ಡಿಂಗ್ ಬರುತ್ತಿದೆಯೆಂದು…
-ರಘೋತ್ತಮ ಹೊಬ, ಮೈಸೂರು
—–