ಮಗು ಕವಿತಾ
ದಿನ ತುಂಬಿಲ್ಲ
ಬರುವೆನೆಂದರೆ ಹೇಗೆ
ನೀನಲ್ಲೇ ಮಾಗಿ ಬರಬೇಕು ಕಂದಾ
ನನ್ನನೇಕೆ
ತಡೆಯುತ್ತಿರುವೆ
ಈಗಾವ ಗೋಷ್ಟಿ ಇಲ್ಲವೇನು
ಬೇಕಾದಾಗ ಪ್ರಸವ ವೇದನೆ
ಇಲ್ಲದೆಯೂ ಶಸ್ತ್ರಚಿಕಿತ್ಸೆಗೊಳಗಾಗಿ ಹೆತ್ತಿರುವಿಯಲ್ಲ
ನನ್ನಕ್ಕಂದಿರು ಅವರೆಲ್ಲಾ ಪಕ್ವಗೊಂಡೇ ಬಂದರೇನು ತೇಪೆ ಹಾಕಿ ಬೀಗುತ್ತಿಲ್ಲವೆ
ನಾನು ಬರುವೆನೆಂದರೆ ಯಾವ ತಕರಾರಿದು
ಮತ್ತೊಂದು ಅಪಕ್ವ ಕಾವ್ಯ ಹೆತ್ತೆನೆಂದು ಭೀಗಿದರಾಯಿತು
ನಿನಗೆ ಗೊತ್ತಾಗುವುದಿಲ್ಲ
ಸುಮ್ಮನಿರು ಕಂದಾ
ನನ್ನನೇಕೆ ದೂರುತ್ತಿರುವೆ
ನೀನು ಹೆರುತ್ತಿರುವುದು ಅದೇ
ಅಪಕ್ವ ಕಾವ್ಯವಲ್ಲವೇ
ನಿನ್ನ ಅವಸರ ಬುದ್ಧಿಗೆ
ಕೆಣಕು ತಿಣುಕುಗಳಿಗೆ
ತೇಪೆಯಲ್ಲದೆ, ಸರಳ ಹೆರಿಗೆ ಆಗುವುದೇನು
-ಭಾರತಿ ಅಶೋಕ್, ಹೊಸಪೇಟೆ
—–