ಊರ್ಮಿಳೆಯ ಸ್ನಾನ
ತನ್ನೊಳಗೇ ಪಿಸುಗುಟ್ಟಿಕೊಳ್ಳುತ್ತಾ
ದುಗುಡ ಹೊತ್ತು , ಸಂಭಳಿಸಿಕೊಳ್ಳಲಾಗದ
ಕಾಮನೆಗಳ ಭಾರ ಹೇರಿಕೆಯನ್ನು
ಉಜ್ಜಿ ಉಜ್ಜಿ ತೊಳೆಯುತ್ತ
ಊರ್ಮಿಳೆ ಸ್ನಾನಕ್ಕಿಳಿಯುತ್ತಾಳೆ
ಕತ್ತಲ ಬಚ್ಚಲಿನ ಮರೆಯಲ್ಲಿ
ಧಾರೆಧಾರೆಯಾಗಿ ಸುರಿದುಕೊಳ್ಳುವ
ಅಸಂಖ್ಯಾತ ನೀರ ಹನಿಗಳು
ಅವಳ ಕಣ್ಣೀರಿನೊಂದಿಗೆ
ಭಾಷ್ಯ ಬರೆಯುತ್ತ ಸಂತೃಪ್ತಗೊಳ್ಳುತ್ತವೆ.
ಅದೇ ಬಚ್ಚಲಲ್ಲಿ ಭಾವವನ್ನೆಲ್ಲ ಬೆಳಕಾಗಿಸಿ
ವಿರಹದ ಕಲೆಗಳನ್ನೆಲ್ಲ ತೊಳೆದು
ದೇಹ ಕಾಮನೆಗಳನ್ನು ಸುದೀರ್ಘ
ಸಮಯಕ್ಕೆ ಅನುವುಗೊಳಿಸಿಕೊಳ್ಳುವ
ಅನಿವಾರ್ಯತೆ ಅವಳಿಗೆ
ಕಣ್ಣಂಚಿನ ಆಹ್ವಾನವನ್ನೂ ಕಾಣದೆ
ತುಟಿಗಳ ಮಧುರ ಕಂಪನವನ್ನೂ
ಸರಿಸಿ, ಮೌನ ಆಂದೋಲನವನ್ನು
ಕಡೆಗಣಿಸಿ ತೊರೆದೇ ಹೋದ
ಪ್ರಿಯ ಸಖನ ಯೌವನಿಗ ವೃದ್ಧೆ
ದೂಷಿಸಲಾರಳು ಯಾರನ್ನೂ
ತನ್ನ ದೌರ್ಭಾಗ್ಯವನ್ನೂ ತನ್ನ
ಹಣೆಯ ಹಳಹಳಿಕೆಯನ್ನು
ಮುಗುಳ್ನಗೆಯ ಮುಖವಾಡ
ಆಸೆ, ತಾಪ, ಕೋಪಗಳ
ಭಾವಾವೇಷ, ತಬ್ಬಲಿತನದ ರೂಪ
ಎಲ್ಲವೂ ಶಿಸ್ತಾಗಿ ಸಜ್ಜುಗೊಳ್ಳುವುದು
ಇಲ್ಲಿಯೇ ಇದೇ ಸ್ನಾನಗೃಹದಲ್ಲಿಯೆ
ದಾಂಪತ್ಯದ ಸೊಬಗು, ವಿಸ್ಮಯ
ಸಂಭ್ರಮದ ಘಳಿಗೆಗಳನ್ನು
ವಿಸ್ಮೃತಿಗೆ ತಳ್ಳುತ್ತಾ ಅಣಿಯಾಗಬೇಕು
ಹುಸಿ ರಾಣಿವಾಸದ ಘನ
ಪ್ರತಿಕೃತಿಗೆ ತಕ್ಕಂತೆ ರೂಪುಗೊಳ್ಳಬೇಕು
ಅವಳು ಮತ್ತು ಅವಳ ವ್ಯಕ್ತಿತ್ವ
ಏನು ಮಾಡಿಯಾಳು ಮುಗ್ಧೆ
ದಿವ್ಯರೂಪಿನ ಸ್ನಿಗ್ಧೆ
ಅದೃಶ್ಯದ ಗೋಡೆಯೊಂದರ
ಹಿಂದೆ ಬಚ್ಚಿಟ್ಟುಕೊಂಡು
ನೀಳಬಾಹುವಿನ ಕಾಲದ
ಬಂಧನದಲ್ಲಿ ಬಂಧಿಯಾಗುತ್ತಾಳೆ
ಯಾವತ್ತಿಗೂ ಜ್ವಲಿಸುವ
ಪ್ರತಿಮೆಯಾಗಿಯೆ ಉಳಿಯುತ್ತಾಳೆ
-ಮಮತಾ ಅರಸೀಕೆರೆ, ಅರಸೀಕೆರೆ
—–