ನನ್ನದೇ ನಿಘಂಟು!
ನನಗೆ ನನ್ನದೇ ಒಂದು ನಿಘಂಟಿತ್ತು
ಅದಕ್ಕೆ ಮಳೆಯ ಖುಷಿಯಿತ್ತು
ನೆಲದ ಚೈತನ್ಯವಿತ್ತು
ಹೂವಿನ ಘಮವಿತ್ತು, ಹಕ್ಕಿ ಹಾಡಿತ್ತು
ವಸಂತದ ಸಂಭ್ರಮ
ಬೆರಗು, ಬೆಡಗು ಎಲ್ಲವೂ ಇತ್ತು
ಪ್ರತಿದಿನ,
ಯಾರ್ಯಾರೋ ಪದಗಳನ್ನು
ಸೇರಿಸುತ್ತಲೇ ಹೋದರು
ರೋಷ, ದ್ವೇಷ, ಅಸೂಯೆ ಹೀಗೆ
ನನ್ನದಲ್ಲದ ಎಷ್ಟೊಂದು
ಫೇಸ್ ಬುಕ್ಕಿನ ಪದಗಳು!
ನಿಘಂಟು ಬೆಳೆಯುತ್ತಲೇ ಇತ್ತು
ಹೊರಲಾರದ ಹೊರೆಯಾಯಿತು
ಬರೆಯುವಾಗ,
ಯಾವ್ಯಾವ ಪದಗಳೋ ಹೊಮ್ಮಿ
ಗೊಂದಲ, ಗಲಿಬಿಲಿ, ಅಸಹಜ ಭಾವ
ಈಗೀಗ ಗಿಡಮರಗಳೊಂದಿಗೆ ಮತ್ತೆ
ಮಾತು, ಕತೆ, ನಗು…
ಚಿಗುರು ಪದಗಳು ಸೇರುವ ಮುನ್ನ
ಕೊಳೆತದ್ದನ್ನೆಲ್ಲ ಕಿತ್ತೆಸೆಯಬೇಕಾಗಿದೆ
ನನ್ನದೇ ನಿಘಂಟಿಗೆ ಮರಳಬೇಕಿದೆ
-ಎಂ.ಆರ್ ಕಮಲ, ಬೆಂಗಳೂರು
—–