🌧️ ಆಕಾಶ ಬಿಕ್ಕುತಿದೆ 🌩️
ಆಕಾಶ ಬಿಕ್ಕುತಿದೆ
ಮುಗಿಲ ಮುಸುಕ ಮರೆಗೆ
ಮಾತಿರದ ತಾರೆಗಳು
ಅಡಗಿ ಕುಳಿತ ಗಳಿಗೆ.
ಸೂರ್ಯ ಚಂದ್ರರಿರದೆ, ಸುರಿದ
ಕಪ್ಪು ಸುತ್ತ ಚೆಲ್ಲಿ
ಹಸಿರ ಉಸಿರು ಅಡಗಿ ಹೋಗಿ
ಉಳಿವ ದಾರಿ ಎಲ್ಲಿ?
ಕುದಿವ ಕಡಲು ಹೊರಳುತ್ತಿದೆ
ಒಡಲ ಆಳದುರಿಗೆ
ಬದಿಯ ಒಂಟಿ ದೀಪದಿಂದ
ಮಬ್ಬು ಸುರಿವುದಿಳೆಗೆ.
ಮಸುಕು ಮಸುಕು ಆಕೃತಿಗಳು
ಚಲಿಸಿದಂತಿದೆ
ಕವಿದ ತೆರೆಯ ಆಚೆಯಿಂದ
ಏನೋ ಹೊಳೆದಿದೆ.
-ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ್ಷಿಣ ಕನ್ನಡ
——