ತುತ್ತಿನ ಚೀಲ
ಹತ್ತು ಹರದಾರಿ ನಡೆದರೂ
ತುತ್ತಿನ ಚೀಲ ತುಂಬಲಿಲ್ಲ
ಮಡುವಿನ ನೀರು ಕುಡಿದು
ಮುಗ್ಗುಲು ಜ್ವಾಳಕೆ ಕಾದು
ಸವರಾತ್ರಿಗೆ ತಂದು ತಿಂದು
ಮಬ್ಬು ಗತ್ತಲೆ ಸಿಳಿ ದಾರಿಗುಂಟ
ಸೈನಿಕನಂತೆ ನಡೆದ ದಾರಿ
ನಗುತ್ತಿತ್ತು ಹಸಿದೊಡಲ ಕಂಡು
ನೆಲ ಸಿಳಿ ಒಡ್ಡಿನೊಡಲ ತುಂಬಿ
ಹೊಟ್ಟೆ ತುಂಬಲಿಲ್ಲ ಅಪ್ಪನದು
ಆಕಾಶದ ನಕ್ಷತ್ರಗಳು ಅಂಗಿ ತುಂಬಾ ಅಣಕಿಸಿ ನಗುತ್ತಿದ್ದವು
ಕಚ್ಛೆ ಹಾಕಿದ ದೊತರ ಬಿಚ್ಚಿದರೆ
ಬರಿ ಗಂಟಿನ ದರ್ಶನ
ಸುತ್ತಲು ರುಮಾಲಿನ ಬದಲು
ಪಡಕಿ ತುಂಡು ನೆತ್ತಿಗೆರಿತ್ತು
ಮಳಲಿನ ದಾರಿ ಕೆಂಡವಾಗಿ
ಸುಡುತ್ತ ಕಾಲಿಗೆ ಬರೆ ಎಳೆದು
ಜೀವ ಹಿಂಡಿದರೂ ಹಿಡಿ ಅನ್ನ
ತರುವ ಅಪ್ಪನಿಗಾಗಿ ಕಾದು
ನಿದ್ರೆಗೆ ಜಾರುತ್ತಿದ್ದ ಜೀವಗಳು
ಮತ್ತದೆ ಹಗಲು ರಾತ್ರಿ ಚಿಂತೆ
ಕೋಳಿ ನಿದ್ದೆ ಬೆಳಕು ಹರಿವ
ಮುನ್ನ ಓಡುವ ತವಕ ನಿತ್ಯ ನರಕ
ಸೋಲೊಪ್ಪದೆ ಹಿಡಿದ ಕಾಯಕ
ಹಿಡಿ ಅನ್ನಕೆ ಮಾಡಿದ ಅಪ್ಪ.
-ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ
—–