ಅನುದಿನ ಕವನ-೧೨೯೦, ಕವಿ: ಆರ್ ನಾಗರಾಜು, ಬಾಗಲಕೋಟೆ, ಕವನದ ಶೀರ್ಷಿಕೆ: ಯಾರಿವರು?

ಯಾರಿವರು?

ಯಾರಿವರು
ಬಾಧೆ ಹುಲ್ಲಿನ ಅರಮನೆಯಲ್ಲಿ ಜನಿಸಿ
ಹರಕು ಬಟ್ಟೆಯ ಹಾಸಿಗೆಯಲ್ಲಿ ಮಲಗಿ
ಅನ್ನವಿಲ್ಲದೆ ಹಸಿವನ್ನು ತಾಳಿಕೊಂಡು
ಮಾಯಾ ಪ್ರಪಂಚದ ಜನರಿಗೆ
ಬೇಕಾದವರು
ಯಾರಿವರು
ಬೀದಿ ಬೀದಿಯನ್ನು ಹಸನುಗೊಳಿಸಿ
ಸಿರಿವಂತರ ಹಾದಿಗೆ ಹಾಲೆರೆದು ರಾಜಕಾರಣಿಗಳ ದಾರಿಗೆ ಹೂವು ಚೆಲ್ಲಿ
ಅರೆ ಹೊಟ್ಟೆಯಲ್ಲಿ ಜೀವನ ನಡೆಸುವವರು
ಯಾರಿವರು
ಧನದಾಹಿಗಳ ಹಮ್ಮು ಬಿಮ್ಮಿಗೆ
ಒಳಗಾಗಿ
ಜಮೀನುದಾರಿಗಳ ದಾಳಿಗೆ ಈಡಾಗಿ
ಉರಿ ಬಿಸಿಲಿನಲ್ಲಿ ಬೆವರು ಸುರಿಸಿ
ಕರ್ತವ್ಯವೇ ದೇವರೆಂದು ನಂಬಿದವರು.
ಯಾರಿವರು
ಹಾದಿಯಲ್ಲಿದ್ದ ಎಂಜಲನ್ನು ಬಾಚಿ
ಬೀದಿಯಲ್ಲಿದ್ದ ಹೊಲಸನ್ನು ಸಾರಿಸಿ
ಚರಂಡಿಯಲ್ಲಿದ್ದ ಕೆಸರನ್ನು ಸಾಗಿಸಿ
ಅರೆ ಕೂಲಿ ಪಡೆದು ಜೀವಿಸುವವರು.
ಯಾರಿವರು
ಸಮಾಜದಿಂದ ದೂರ ಉಳಿದು ನಾಗರಿಕತೆಯ ನಲಿವನ್ನು ಕಾಣದವರು
ಈ ಜಗದ ಸಹೋದರರು ಇವರೇ
ಇವರು ಕಸ ಗುಡಿಸುವವರು.


-ಆರ್ ನಾಗರಾಜು, ಬಾಗಲಕೋಟೆ